ರಾಜ್ಯ
Trending

ಬೆಂಗಳೂರು-ಮೈಸೂರು ಹೆದ್ದಾರಿಗೆ ಚನ್ನಪಟ್ಟಣದಲ್ಲಿ ಹೊಸ ಎಂಟ್ರಿ, ಎಕ್ಸಿಟ್​​

ರಾಮನಗರ, ಏಪ್ರಿಲ್​ 29: ಪ್ರವಾಸಿಗರು ಹಾಗೂ ವಾಹನ ಸವಾರರ ಅನುಕೂಲಕ್ಕಾಗಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ (Bengaluru-Mysore National Highway) ಹೊಸ ಪ್ರವೇಶ ಮತ್ತು ನಿರ್ಗಮನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅನುಮತಿ ನೀಡಿದೆ ಎಂದು ಸಂಸದ ಡಾ. ಮಂಜುನಾಥ್​ (Dr. Manjunath) ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಂಕ್ಷನ್ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣದ ರಾಂಪುರದ ಬಳಿ ಪ್ರವೇಶ ಮತ್ತು ನಿರ್ಗಮನಕ್ಕೆ ಜಾಗ ಗುರುತಿಸಲಾಗಿತ್ತು. ಆದರೆ ಅಲ್ಲಿ ಸೂಕ್ತ ಜಾಗ ಇಲ್ಲದಿದ್ದಕ್ಕೆ ಕಣ್ವ ಜಂಕ್ಷನ್ ಬಳಿ ಜಾಗ ಗುರುತು ಮಾಡಲಾಗಿದೆ ಎಂದು ಹೇಳಿದರು.ಹೀಗಾಗಿ, ಸ್ಥಳೀಯ ಶಾಸಕರು ಹಾಗೂ ಎನ್​ಹೆಚ್​ಎಐ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ಮಾಡಲಾಗಿದೆ. ಕಣ್ವ ಜಂಕ್ಷನ್​​ನಲ್ಲಿ ಪ್ರವೇಶ ಮತ್ತು ನಿರ್ಗಮನ ನಿರ್ಮಾಣವಾದರೆ ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತದೆ. ಕಣ್ವ ಡ್ಯಾಂ, ಕೆಂಗಲ್ ಆಂಜನೇಯನ ದೇವಾಲಯ ಹಾಗೂ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸುತ್ತೆ ಎಂದರು.ಅಲ್ಲದೇ ಶೀಘ್ರದಲ್ಲೇ ಮೂರು ಕಡೆಗಳಲ್ಲಿ ಸ್ಕೈವಾಕ್ ಕಾಮಗಾರಿ ಮುಗಿಯಲಿದೆ. ಚನ್ನಪಟ್ಟಣದ ಬಳಿ ಟಾಯ್ಸ್ ಪಾರ್ಕ್ ಕೂಡ ನಿರ್ಮಾಣವಾಗಲಿದೆ. ಅದಕ್ಕೂ ಈಗಾಗಲೇ ಜಾಗ ಗುರುತು ಮಾಡಲಾಗಿದೆ. ಹೆದ್ದಾರಿಯ ಎಲ್ಲ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಪಹಲ್ಗಾಮ್ ದಾಳಿಗೆ ಕೇಂದ್ರ ಭದ್ರತಾ ವೈಫಲ್ಯ ಕಾರಣ ಎಂಬ ವಿಪಕ್ಷಗಳ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಘಟನೆಗೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುವುದು ಮುಖ್ಯವಾಗುತ್ತದೆ. ಈ ಕ್ಷಣಕ್ಕೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸುವ ಬಗ್ಗೆ ಯೋಚನೆ ಮಾಡಬೇಕು. ಮಿಕ್ಕಿದ್ದೆಲ್ಲ ಆಮೇಲೆ ಮಾತನಾಡಬಹುದು. ಯುದ್ಧ ಎಂಬುದು ಸೂಕ್ಷ್ಮವಾದ ವಿಚಾರ, ಅದರ ಬಗ್ಗೆ ಎಲ್ಲೆಂದರಲ್ಲಿ ಚರ್ಚೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.

ಹೆದ್ದಾರಿಯಲ್ಲಿ ಹೊಸ ಎಂಟ್ರಿ ಮತ್ತು ಎಕ್ಸಿಟ್ ನಿರ್ಮಾಣಕ್ಕೆ ಎನ್​ಹೆಚ್​ಎಐ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸೇರಿಕೊಂಡು ಸಂಸದ ಡಾ.ಮಂಜುನಾಥ್ ಹಾಗೂ ಶಾಸಕ ಸಿ.ಪಿ.ಯೋಗೇಶ್ವರ್ ಸ್ಥಳ ಪರಿಶೀಲನೆ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button