ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆಗೆ ಬಿಜೆಪಿ ಒತ್ತಾಯ………..

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಕನ್ನಡದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಅಂಜಲಿ ನಿಂಬಾಳ್ಕರ್ ಅವರ ಪತಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಮತ್ತು ಅವರನ್ನು ಚುನಾವಣೆ ಸಂಬಂಧಿತ ಎಲ್ಲ ಕೆಲಸಗಳಿಂದ ಮುಕ್ತಗೊಳಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಹೇಮಂತ್ ನಿಂಬಾಳ್ಕರ್ ಅವರು ಸದ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಬಿಜೆಪಿ ತಿಳಿಸಿದೆ. ‘ಹೇಮಂತ್ ಅವರು ಕರ್ನಾಟಕದಲ್ಲಿ ಅತ್ಯಂತ ಪ್ರಭಾವಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಚುನಾವಣೆ ದೃಷ್ಟಿಯಿಂದ, ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಒಲವು ತೋರಲು ಇತರ ಐಪಿಎಸ್ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾ ಕಾರ್ಯದಲ್ಲಿರುವ ಸಿಬ್ಬಂದಿ ಮೇಲೆ ಪ್ರಭಾವ ಬೀರುವ ಎಲ್ಲ ಸಾಧ್ಯತೆಗಳಿವೆ. ಅವರು ಅದೇ ಹುದ್ದೆಯಲ್ಲಿ ಮುಂದುವರಿದರೆ, ಕಾಂಗ್ರೆಸ್ ಮತ್ತು ಅದರ ಅಭ್ಯರ್ಥಿಗಳ ಪರವಾಗಿ ತಮ್ಮ ಪ್ರಭಾವವನ್ನು ಬಳಸುತ್ತಾರೆ’ ಎಂದು ಬಿಜೆಪಿ ಹೇಳಿದೆ.




