ರಾಜ್ಯ
Trending

ಕರ್ನಾಟಕದ ತೋತಾಪುರಿ ಮಾವು ನಿಷೇಧ ಹಿಂಪಡೆಯಿರಿ

ಕರ್ನಾಟಕದ ತೋತಾಪುರಿ ಮಾವು (Totapuri Mango) ಖರೀದಿ ನಿಷೇಧಿಸಿ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ಕೋಲಾರ ಮತ್ತು ಚಿಕ್ಕಬಳ್ಳಾಪುರದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರ ಬೆನ್ನಲ್ಲೇ, ಮಧ್ಯ ಪ್ರವೇಶ ಮಾಡಿದ್ದ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್​ ಆಂಧ್ರಪ್ರದೇಶ ಸರ್ಕಾರಕ್ಕೆ ಪತ್ರ ಬರೆದು, ನಿಷೇಧ ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಇದೀಗ ಖುದ್ದು ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕದ ರೈತರ ನೆರವಿಗಾಗಿ ಅಖಾಡಕ್ಕಿಳಿದಿದ್ದಾರೆ. ಚಿತ್ತೂರು ಜಿಲ್ಲಾಡಳಿತವು ಕರ್ನಾಟಕದ ತೋತಾಪುರಿ ಮಾವು ಖರೀದಿ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಬೇಕು ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿವೆ ಪತ್ರ ಬರೆದಿದ್ದಾರೆ.

ಇತರ ರಾಜ್ಯಗಳಿಂದ ತೋತಾಪುರಿ ಮಾವಿನ ಹಣ್ಣುಗಳನ್ನು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಿ ಚಿತ್ತೂರು ಜಿಲ್ಲಾಧಿಕಾರಿಗಳು ಜೂನ್ 07 ರಂದು ಆದೇಶ ಹೊರಡಿಸಿರುವುದು ತಿಳಿದುಬಂದಿದೆ. ಈ ಹಠಾತ್ ಮತ್ತು ಏಕಪಕ್ಷೀಯ ಕ್ರಮವು ಕರ್ನಾಟಕದ ಮಾವು ಬೆಳೆಗಾರರಿಗೆ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಗಣನೀಯ ಪ್ರಮಾಣದಲ್ಲಿ ತೋತಾಪುರಿ ಮಾವನ್ನು ಬೆಳೆಯುವವರಿಗೆ ಹೆಚ್ಚಿನ ತೊಂದರೆಯನ್ನುಂಟು ಮಾಡಿದೆ. ಈ ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಚಿತ್ತೂರು ಮೂಲದ ಸಂಸ್ಕರಣಾ ಘಟಕಗಳೊಂದಿಗೆ ದೀರ್ಘಕಾಲದಿಂದ ಸಂಪರ್ಕ ಹೊಂದಿದ್ದಾರೆ. ಪ್ರಸ್ತುತ ನಿರ್ಬಂಧವು ಈ ಸುಸ್ಥಾಪಿತ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸಿದೆ ಮತ್ತು ಕೊಯ್ಲಿನ ನಂತರದ ಗಮನಾರ್ಹ ನಷ್ಟವನ್ನುಂಟುಮಾಡಿದೆ, ಇದು ಸಾವಿರಾರು ರೈತರ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆಂಧ್ರ ಸಿಎಂಗೆ ಬರೆದ ಪತ್ರದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

ಪೂರ್ವ ಸಮಾಲೋಚನೆ ಅಥವಾ ಸಮನ್ವಯವಿಲ್ಲದೆ ತೆಗೆದುಕೊಳ್ಳುವ ಈ ರೀತಿಯ ಕ್ರಮಗಳು ಸಹಕಾರಿ ಒಕ್ಕೂಟ ವ್ಯವಸ್ಥೆಯ ಮನೋಭಾವಕ್ಕೆ ವಿರುದ್ಧವಾಗಿವೆ. ಇದು ಉದ್ವಿಗ್ನತೆ ಮತ್ತು ಪ್ರತೀಕಾರದ ಕ್ರಮಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸುತ್ತೇನೆ. ಪಾಲುದಾರರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ, ಇದು ತರಕಾರಿಗಳು ಮತ್ತು ಇತರ ಕೃಷಿ ಸರಕುಗಳ ಅಂತರ-ರಾಜ್ಯ ಸಾಗಣೆಯನ್ನು ಅಡ್ಡಿಪಡಿಸಬಹುದು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.ಈ ವಿಷಯದಲ್ಲಿ ನೀವು (ಚಂದ್ರಬಾಬು ನಾಯ್ಡು) ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇನೆ ಮತ್ತು ಚಿತ್ತೂರು ಜಿಲ್ಲಾಡಳಿತದ ಆದೇಶವನ್ನು ತಕ್ಷಣವೇ ರದ್ದುಗೊಳಿಸಲು ಜಿಲ್ಲೆಯ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡಬೇಕೆಂದು ವಿನಂತಿಸುತ್ತೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ರೈತರ ಕಲ್ಯಾಣದ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಸರಾಗ ಸಾಗಣೆಯನ್ನು ಪುನಃಸ್ಥಾಪಿಸಲು ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button