ಸಿನಿಮಾ
Trending

ತಮಿಳಿಗರಿಗೆ ಕಮಲ್ ಅಭಿಮಾನಿಗಳಿಂದ ಓಪನ್ ಪತ್ರ

ಕಮಲ್ ಹಾಸನ್ (Kamal Haasan) ಅವರು ತಾವು ನೀಡಿದ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆ ಸರಿಯೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರು ಕ್ಷಮೆ ಕೇಳುವಂತೆ ಪದೇ ಪದೇ ಆಗ್ರಹಿಸಿದರೂ ಅವರು ಬಗ್ಗುತ್ತಿಲ್ಲ. ಈಗ ಕಮಲ್ ಹಾಸನ್ ಪರ ತಮಿಳಿಗರು ಬ್ಯಾಟ್ ಬೀಸುತ್ತಿದ್ದಾರೆ. ಅವರ ಪರ ತಾವು ಸದಾ ನಿಲ್ಲೋದಾಗಿ ಹೇಳಿರೋ ಇವರು, ಹಿಂದೆ ಸರಿಯುವ ಮಾತೇ ಇಲ್ಲ ಎಂದಿದ್ದಾರೆ. ಅಲ್ಲದೆ, ಎಲ್ಲಾ ತಮಿಳಿಗರು ಎಚ್ಚರಿಕೆಯಿಂದ ಓದುವಂತೆ ಪತ್ರದಲ್ಲಿ ಬರೆಯಲಾಗಿದೆ.

ಪತ್ರದಲ್ಲಿ ಏನಿದೆ?

‘ಈ ಪತ್ರವನ್ನು ಎಲ್ಲಾ ತಮಿಳಿಗರು ಎಚ್ಚರಿಕೆಯಿಂದ ಓದಬೇಕು. ಕಮಲ್ ಹಾಸನ್ ಸತ್ಯವನ್ನು ಧೈರ್ಯದಿಂದ ಹೇಳಿದ್ದಾರೆ. ಅವರ ಸಿನಿಮಾ ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗುವ ಬೆದರಿಕೆ ಇದ್ದರೂ ಕಮಲ್ ಅವರು ಹಿಂದೆ ಸರಿಯಲಿಲ್ಲ ಮತ್ತು ಅವರು ಕನ್ನಡಿಗರಿಗೆ ಕ್ಷಮಿಸಿ ಎಂದು ಕೇಳಲಿಲ್ಲ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಆಗದೆ ಇದ್ದರೆ ಅವರು 40ರಿಂದ 70 ಕೋಟಿ ರೂಪಾಯಿ ಕಳೆದುಕೊಳ್ಳಬಹುದು. ಜೊತೆಗೆ ಪರಿಹಾರವನ್ನು ಸಹ ಪಾವತಿಸಬೇಕಾಗಬಹುದು. ಆದರೂ ಕಮಲ್ ತನ್ನ ನಿಲುವನ್ನು ಬಿಟ್ಟಿಲ್ಲ’ ಎಂದು ತಮಿಳಿಗರು ಪತ್ರದಲ್ಲಿ ಹೇಳಿದ್ದಾರೆ.‘ಕ್ಷಮಿಸಿ ಎಂದು ಹೇಳುವುದು ಕಮಲ್ ವೈಯಕ್ತಿಕವಾಗಿ ಮಾತ್ರ ಕೇಳಿದಂತೆ ಆಗೋದಿಲ್ಲ. ಪ್ರತಿಯೊಬ್ಬ ತಮಿಳಿಗನೂ ಕ್ಷಮೆಯಾಚಿಸಿದಂತೆ ಭಾಸವಾಗುತ್ತಿತ್ತು. ನಾವು ಕ್ಷಮೆ ಕೇಳೋಕೆ ಏನೂ ಇಲ್ಲ. ಇದು ಕೇವಲ ಸಿನಿಮಾ ಬಗ್ಗೆ ಮಾತ್ರವಲ್ಲ. ಇದು ನಮ್ಮ ಹೆಮ್ಮೆ, ಸತ್ಯ ಮತ್ತು ತಮಿಳಿನ ಅಸ್ಮಿತತೆ ಬಗ್ಗೆ’ ಎಂದು ಅವರು ಹೇಳಿದ್ದಾರೆ.‘ಚಿತ್ರಮಂದಿರಗಳಲ್ಲಿ ಥಗ್ ಲೈಫ್ ಸಿನಿಮಾ ವೀಕ್ಷಿಸಿ, ಬೆಂಬಲಿಸಿ. ಕಮಲ್ ಹಾಸನ್ ಜೊತೆ ನಿಲ್ಲಿ’ ಎಂದು ತಮಿಳಿಗರು ಬರೆದುಕೊಂಡ ಪತ್ರ ವೈರಲ್ ಆಗಿದೆ. ಸದ್ಯ ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರದ ರಿಲೀಸ್ ವಿಚಾರ ಅನಿಶ್ಚಿತವಾಗಿದೆ. ಕಮಲ್ ಹಾಸನ್ ಕ್ಷಮೆ ಕೇಳಿಲ್ಲ ಎಂದರೆ ಚಿತ್ರ ಬಿಡುಗಡೆ ಆಗೋದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button