
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಸೇನಾ ಸಂಘರ್ಷವನ್ನು ತಡೆದಿದ್ದು ನಾನೇ ಎಂದು ಮತ್ತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಉಚ್ಚರಿಸಿದ್ದಾರೆ.
ದಕ್ಷಿಣ ಏಷ್ಯಾದ ಎರಡು ನೆರೆಹೊರೆಯ ದೇಶಗಳು ಪರಮಾಣು ಯುದ್ಧದ ಅಂಚಿನಲ್ಲಿದ್ದರು. ಆದರೆ, ಅಮೆರಿಕ ಶಾಂತಿ ಕರೆ ನೀಡಿತು. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ತಡೆಯುವಲ್ಲಿ ನಾನು ಯಶಸ್ವಿಯಾದೆ. ಈ ಯುದ್ಧ ನಿಲ್ಲಿಸದಿದ್ದರೆ, ಪಾಕಿಸ್ತಾನ ಇನ್ನೊಂದು ವಾರದಲ್ಲಿ ಪರಮಾಣು ಯುದ್ಧಕ್ಕೆ ಸಜ್ಜಾಗಿತ್ತು. ಆ ರೀತಿ ಆಗಿದ್ದರೆ, ಪರಿಸ್ಥಿತಿ ಕೆಟ್ಟದಾಗಿರುತ್ತಿತ್ತು ಎಂದು ಟ್ರಂಪ್ ಅವರು ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ.
ಈ ಯುದ್ಧವನ್ನು ನಿಲ್ಲಿಸಲು ವ್ಯಾಪಾರದ ತಂತ್ರಗಾರಿಕೆಯನ್ನು ಬಳಕೆ ಮಾಡಲಾಯಿತು ಎಂದು ತಿಳಿಸಿದ ಟ್ರಂಪ್, ಯುದ್ಧ ಇತ್ಯರ್ಥವಾಗದ ಹೊರತಾಗಿ ನಾವು ವ್ಯಾಪಾರದ ಕುರಿತು ಮಾತನಾಡುವುದಿಲ್ಲ ಎಂದು ಹೇಳಿದೆವು. ಅದರಂತೆಯೇ ಆಯಿತು ಎಂದರು.
ಜೂನ್ನಲ್ಲಿ ಏರ್ ಫೋರ್ಸ್ ಒನ್ನಲ್ಲಿ ವರದಿಗಾರರ ಜೊತೆ ಮಾತನಾಡಿದ್ದ ಟ್ರಂಪ್, ನಿಮಗೆ ಗೊತ್ತಾ ಜನರು ಮಾತನಾಡುವಂತಹ ಕೆಲಸವನ್ನು ನಾನು ಮಾಡಿದ್ದೇನೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಆದರೆ, ನಾನು ಭಾರತ ಮತ್ತು ಪಾಕಿಸ್ತಾನ ನಡುವೆ ಆಗಲಿದ್ದ ದೊಡ್ಡ ಪರಮಾಣು ಸಮಸ್ಯೆಯನ್ನು ಪರಿಹರಿಸಿದೆ ಎಂದರು. ನಾನು ಪಾಕಿಸ್ತಾನ ಮತ್ತು ಭಾರತದೊಂದಿಗೆ ಮಾತನಾಡಿದೆ. ಅವರು ಅದ್ಭುತ ನಾಯಕರು. ಆದರೆ, ಪರಮಾಣು ಯುದ್ಧಕ್ಕೆ ಸಜ್ಜಾಗಿದ್ದರು ಎಂದಿದ್ದಾರೆ.
ಭಯೋತ್ಪಾದಕರ ಅಡಗು ತಾಣದ ಮೇಲೆ ಭಾರತ ನಿಖರ ದಾಳಿ ಬಳಿಕ ಇಸ್ಲಾಮಾಬಾದ್ ನಡೆಸಿದ ಆಕ್ರಮಣಕ್ಕೆ ನವದೆಹಲಿ ತಕ್ಕ ಪ್ರತಿಕ್ರಿಯೆ ನೀಡಿತ್ತು. ಬಳಿಕ ಸೇನಾ ಡಿಜಿಎಂಗಳ ಮಾತುಕತೆಯಿಂದ ಕದನ ವಿರಾಮ ಘೋಷಿಸಲಾಯಿತು. ಈ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ ಕೀರ್ತಿಯನ್ನು ಪದೇ ಪದೇ ಪಡೆಯುವ ಪ್ರಯತ್ನವನ್ನು ಅಮೆರಿಕ ಮುಂದುವರೆಸಿದೆ.
ಈ ನಡುವೆ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನಿರಾಕರಿಸಿರುವ ಭಾರತ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಅಮೆರಿಕದ ಹಸ್ತಕ್ಷೇಪ ಬೇಡ. ಇದನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಲಿವೆ ಎಂದು ಸ್ಪಷ್ಟಪಡಿಸಿದೆ.
ಕ್ವಾಡ್ ಶೃಂಗಸಭೆ ಬಳಿಕ ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಕರೆ ಮಾಡಿ ಈ ಕುರಿತು ಸ್ಪಷ್ಟನೆ ನೀಡಿದ್ದರು. ಆದ್ರೆ ಈ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಈ ಹೇಳಿಕೆ ನೀಡುವುದನ್ನು ನಿಲ್ಲಿಸುತ್ತಿಲ್ಲ.


