ರಾಜ್ಯ
Trending

ಬಿಜೆಪಿಯಿಂದ ಉಚ್ಚಾಟನೆಗೊಂಡ ರೆಬೆಲ್ ಯತ್ನಾಳ್ ಮುಂದಿನ ಪ್ರಮುಖ 5 ದಾರಿ ಇವು!

ಬೆಂಗಳೂರು : ಬಿಜೆಪಿಯಲ್ಲಿ ರೆಬೆಲ್ ನಾಯಕ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಗಿದೆ. ತಮ್ಮ ರಾಜಕೀಯ ಜೀವನದಲ್ಲಿ ಕಮಲ ಪಕ್ಷದಿಂದ 3 ನೇ ಬಾರಿ ಉಚ್ಚಾಟನೆಗೊಂಡಿರುವ ಯತ್ನಾಳ್ ಮುಂದಿನ ನಡೆ ಏನು? ಎಂಬುವುದು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. 6 ವರ್ಷ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನದಿಂದ ಅಮಾನತುಗೊಂಡಿರುವ ಅವರ ಮುಂದಿನ ರಾಜಕೀಯ ಹೋರಾಟದ ಮಾದರಿ ಏನು? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಬಹುಷಃ ಇದು ಯತ್ನಾಳ್ ಅವರಿಂದ ಸಾಧ್ಯವೇ ಎಂಬುವುದು ಕಾಡುವ ಮೊದಲ ಪ್ರಶ್ನೆಯಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದಲ್ಲಿ ಅವರು ಉಚ್ಚಾಟನೆಗೊಂಡಿದ್ದಾರೆ. ಹಾಗಾಗಿ ಸದ್ಯ ಕೊಂಚ ಮಟ್ಟಿಗೆ ತಣ್ಣಗಾಗಿ ವರಿಷ್ಠರ ಮನವೊಲಿಕೆ ಮಾಡುವ ಕಸರತ್ತಿಗೆ ಯತ್ನಾಳ್ ಮುಂದಾಗುತ್ತಾರಾ? ಎಂಬುವುದು ಪ್ರಶ್ನೆಯಾಗಿದೆ. ಇಂತಹ ನಡೆಯನ್ನು ಅವರು ಅನುಸರಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ತನ್ನ ವಿರುದ್ದ ಶಿಸ್ತು ಕ್ರಮ ಆಗಲಿದೆ ಎಂಬುವುದು ಗೊತ್ತಿದ್ದರೂ ಅವರು ವಿಜಯೇಂದ್ರ ಹಾಗೂ ಟೀಂ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಮೂರು ನೋಟಿಸ್‌ಗೂ ಅವರು ಕ್ಯಾರೇ ಅಂದಿರಲಿಲ್ಲ. ಹೀಗಿರುವಾಗ ಉಚ್ಚಾಟನೆಯ ಬಳಿಕ ಸೈಲೆಂಟಾಗುವುದು ಅಸಾಧ್ಯ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.

2009 ರಲ್ಲಿ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಸಚಿವರಾಗಿದ್ದ ಶೋಭಾ ಕರಂದ್ಲಾಜೆ ವಿರುದ್ಧ ಟೀಕೆ ಮಾಡಿದ್ದಕ್ಕೆ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ ಆಗಿದ್ದರು. 2013 ರಲ್ಲಿ ಜೆಡಿಎಸ್ ನಿಂದಲೇ ಸ್ಪರ್ಧಿಸಿದ್ದರು. ಆದರೆ 2014 ರಲ್ಲಿ ಬಿಜೆಪಿಗೆ ಮರಳಿ ಸೇರ್ಪಡೆ ಆಗಿದ್ದರು. ಕಮಲ ತೊರೆದಿದ್ದರಿಂದ ಅವರಿಗೆ ರಾಜಕೀಯವಾಗಿ ಲಾಭವೇನು ಆಗಿರಲಿಲ್ಲ. ಕಟ್ಟರ್ ಹಿಂದುತ್ವದ ಸಿದ್ದಾಂತ ಪ್ರತಿಪಾದಿಸುವ ಅವರು ಮತ್ತೊಂದು ಪಕ್ಷಕ್ಕೆ ವಲಸೆ ಹೋಗುವುದು ಅಸಾಧ್ಯ. ಹೀಗಿರುವಾಗ ಈ ಬಾರಿ ಯಾವ ಹೆಜ್ಜೆಯನ್ನು ಇಡುತ್ತಾರೆ? ಎಂಬುವುದು ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಅನ್ಯ ಪಕ್ಷಕ್ಕೆ ವಲಸೆ ಹೋಗುವ ವಾತಾವರಣ ರಾಜ್ಯದಲ್ಲಿಲ್ಲ. ಇಂತಹ ಸಂದರ್ಭದಲ್ಲಿ ಪ್ರತ್ಯೇಕವಾಗಿದ್ದುಕೊಂಡು ತಮ್ಮ ಅಸ್ಥಿತ್ವವವನ್ನು ಹೇಗೆ ಉಳಿಸಿಕೊಳ್ಳುತ್ತಾರೆ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ಯಾವುದೇ ಪಕ್ಷಕ್ಕೆ ವಲಸೆ ಹೋಗದೆ ಕಮಲ ಸಿದ್ದಾಂತದಲ್ಲಿದ್ದುಕೊಂಡೇ ಪರ್ಯಾಯ ಪವರ್ ಸೆಂಟರ್ ಸ್ವರೂಪದ ರಾಜಕಾರಣವನ್ನು ಯತ್ನಾಳ್ ಆಯ್ಕೆ ಮಾಡಿಕೊಳ್ಳಬಹುದು. ಈಗಾಗಲೇ ಯತ್ನಾಳ್ ಬೆಂಬಲಕ್ಕೆ ಬಿಜೆಪಿಯಲ್ಲಿ ಒಂದು ಬಣ ಇದೆ. ಈ ಬಣದಲ್ಲಿ ರಮೇಶ್ ಜಾರಕಿಹೊಳಿ, ಬಿ ಪಿ ಹರೀಶ್, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಸೇರಿದಂತೆ ಕೆಲವು ನಾಯಕರು ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. ಮತ್ತೆ ಕೆಲವರು ಪರೋಕ್ಷ ಬೆಂಬಲ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹೈಕಮಾಂಡ್ ನಾಯಕರಲ್ಲೂ ಒಂದು ಬಣ ಯತ್ನಾಳ್ ಗೆ ಪರೋಕ್ಷ ಬೆಂಬಲ ನೀಡುತ್ತಿದೆ. ಹೀಗಿರುವಾಗ ಯತ್ನಾಳ್ ರೆಬೆಲ್ ಟೀಂಗೆ ಮತ್ತೆ ನಾಯಕತ್ವ ನೀಡುವುದರಲ್ಲಿ ಸಂಶಯವಿಲ್ಲ.

ನಾನು ಪಕ್ಷದ ಬಲವರ್ಧನೆ ದೃಷ್ಟಿಯಿಂದ ಹೋರಾಟ ಮಾಡಿದ್ದೇನೆ. ಕುಟುಂಬ ರಾಜಕಾರಣದ ವಿರುದ್ಧ ಹೋರಾಟ ಮಾಡಿದ್ದೇನೆ. ಹಾಗಿದ್ದರೂ ನನ್ನನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಅಭಿಮಾನಿಗಳಲ್ಲಿ ಸಹಾನುಭೂತಿ ಸೃಷ್ಟಿಗೆ ಯತ್ನಾಳ್ ಯತ್ನಿಸುವ ಸಾಧ್ಯತೆ ಇದೆ. ರಾಜ್ಯಾದ್ಯಂತ ತಮ್ಮ ಗಟ್ಟಿ ನೆಲೆಗಳಲ್ಲಿ ಪ್ರವಾಸ ಮಾಡಿ ವಿಜಯೇಂದ್ರ ವಿರುದ್ಧ ಅಭಿಪ್ರಾಯ ರೂಪಿಸಲು ಯತ್ನಾಳ್ ಮುಂದಾಗಬಹುದು. ಈ ಮೂಲಕ ವೈಯಕ್ತಿಕವಾಗಿ ತಮ್ಮ ಪರವಾಗಿ ಸಹಾನುಭೂತಿ ಮತ್ತು ಬಿಜೆಪಿಗೆ ಒತ್ತಡ ತರುವ ಪ್ರಯತ್ನವನ್ನು ಅವರು ಇದೇ ಸಂದರ್ಭದಲ್ಲಿ ನಡೆಸಬಹುದು.

ಯತ್ನಾಳ್ ಪದೇ ಪದೇ ನನಗೆ ಹೈಕಮಾಂಡ್ ಕೆಲವು ನಾಯಕರ ಬೆಂಬಲ ಇದೆ ಎಂದು ಹೇಳುತ್ತಿರುತ್ತಾರೆ. ಆದರೆ ಯಾರು ಯತ್ನಾಗೆ ತೆರೆಮರೆಯಲ್ಲಿ ಬೆಂಬಲ ನೀಡುತ್ತಿದ್ದಾರೆ ಎಂಬ ಹೆಸರು ಬಹಿರಂಗಗೊಂಡಿಲ್ಲ. ಇವೆಲ್ಲವನ್ನು ಗಮನಿಸಿದರೆ ದೆಹಲಿಯಲ್ಲಿರುವ ಕೆಲವರು ಸೂತ್ರಧಾರರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದು ದಿಟ. ಈ ಚರ್ಚೆ ಕಮಲದ ಆಂತರಿಕ ವಲಯದಲ್ಲೂ ಜೋರಾಗಿದೆ. ಸ್ವತಃ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ಈ ಬಗ್ಗೆ ಪ್ರಶ್ನಿಸಿದ್ದರು. ಹೀಗಿರುವಾಗ ದಿಲ್ಲಿ ಸೂತ್ರಧಾರರು ಏನು ಸೂಚನೆಯನ್ನು ನೀಡುತ್ತಾರೆ? ಎಂಬುವುದು ಕುತೂಹಲ ಕೆರಳಿಸಿದೆ


Related Articles

Leave a Reply

Your email address will not be published. Required fields are marked *

Back to top button