ಇತ್ತೀಚಿನ ಸುದ್ದಿ

ಆರ್ ಅಶೋಕ್ ಕಾಂಗ್ರೆಸ್‌ ಸೇರ್ಪಡೆ ಆದ್ರಾ?

ಬೆಂಗಳೂರು: ಅಂದು ನನ್ನ ಹುಟ್ಟು ಹಬ್ಬ. ಈ ಹಿನ್ನೆಲೆಯಲ್ಲಿ ರಸ್ತೆ ತುಂಬಾ ಶುಭಕೋರಿ ಅಭಿಮಾನಿಗಳು ಫ್ಲೆಕ್ಸ್ ಅಳವಡಿಸಿದ್ದರು. ಆದರೆ, ರಸ್ತೆಯಲ್ಲಿ ನನ್ನ ಫ್ಲೆಕ್ಸ್ ಒಂದು ಮುರಿದು ಬಿದ್ದಿತ್ತು. ಇದೇ ಸಂದರ್ಭದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ರಸ್ತೆಯಲ್ಲಿ ಮುರಿದು ಬಿದ್ದಿದ್ದ ಫ್ಲೆಕ್ಸ್ ಸರಿಪಡಿಸಿ ನನಗೆ ಫೋನ್ ಮಾಡಿ ತಿಳಿಸಿ ಹುಟ್ಟು ಹಬ್ಬದ ಶುಭ ಕೋರಿದ್ದರು. ಹೀಗೆ ಸದನದಲ್ಲಿ ಅಂದಿನ ಘಟನೆಯನ್ನು ವಿವರಿಸಿದ್ದು ವಿರೋಧ ಪಕ್ಷದ ನಾಯಕ ಆರ್ ಅಶೋಕ್.ಸೋಮವಾರ ಗ್ರೇಟರ್ ಬೆಂಗಳೂರು ವಿಧೇಯಕ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ, ಆರ್ ಅಶೋಕ್ ಮಾತನಾಡುವ ಸಂದರ್ಭದಲ್ಲಿ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಂದು ಉಲ್ಲೇಖ ಮಾಡಿದರು. ಈ ವೇಳೆ ‘ನಮ್ಮ ಎಐಸಿಸಿ ಅಧ್ಯಕ್ಷರು ಎಂದು ಕರೆಯುತ್ತಿದ್ದೀರಿ. ಹಾಗಾದರೆ ನೀವು ಯಾವಾಗ ಕಾಂಗ್ರೆಸ್ ಸೇರ್ಪಡೆ ಆದ್ರಿ’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಕಾಲೆಳೆದರು.ಈ ವೇಳೆ ಖರ್ಗೆ ಕುರಿತಾಗಿ ಮೆಚ್ಚುಗೆಯ ಮಾತನಾಡಿದ ಅಶೋಕ್ ‘ ನಾನು ಅಂದು ಸಚಿವನಾಗಿದ್ದೆ. ನನ್ನ ಹುಟ್ಟು ಹಬ್ಬದ ದಿನದಂದು ಬೆಂಗಳೂರಿನ ರಸ್ತೆಯಲ್ಲಿ ಫ್ಲೆಕ್ಸ್ ಹಾಕಲಾಗಿತ್ತು. ವಿಧಾನಸಭೆ ಅಧಿವೇಶನ ಮುಗಿಸಿ ಖರ್ಗೆ ಮನೆಗೆ ತೆರಳುತ್ತಿದ್ದರು. ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಫ್ಲೆಕ್ಸ್ ಬಿದ್ದಿರುವುದು ಗಮನಿಸಿ, ಕಾರನ್ನು ನಿಲ್ಲಿಸಿ ಅದನ್ನು ಸರಿಪಡಿಸಿದ್ದರು’ ಎಂದು ಸದನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಖರ್ಗೆಗೆ ಮೋದಿಯಿಂದಲೂ ಗೌರವ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ನರೇಂದ್ರ ಮೋದಿ ಕೂಡಾ ಗೌರವ ಕೊಡುತ್ತಾರೆ ಎಂದು ಹೇಳುವ ಮೂಲಕ ಖರ್ಗೆ ಕುರಿತಾಗಿ ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರೇಟರ್ ಬೆಂಗಳೂರು ಮರಣ ಶಾಸನ

ಗ್ರೇಟರ್ ಬೆಂಗಳೂರು ಬಿಲ್‌, ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು. ಡಿಕೆಶಿ ತಂದೆ ಕೆಂಪೇಗೌಡ, ಕೆಂಪೇಗೌಡ ಹೆಸರು ಇಟ್ಟುಕೊಂಡ ತಂದೆಯ ವಂಶಕ್ಕೆ ಸೇರಿದವರಾಗಿ ಕೆಂಪೇಗೌಡ ಕಟ್ಟಿದ ನಾಡನ್ನು ಛಿದ್ರ ಮಾಡುತ್ತಿದ್ದಾರೆ. ಕೆಂಪೇಗೌಡ 36 ಪೇಟೆಗಳನ್ನು ಕಟ್ಟಿದ್ದರು. ಕೆಂಪೇಗೌಡ ಉದ್ದೇಶಕ್ಕೆ ಕೊಡಲಿ ಏಟು ಎಂದು ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರನ್ನು ಇವಾಗ ಭಾಗ ಮಾಡಲು ಹೊರಟಿದ್ದಾರೆ. ಬೆಂಗಳೂರು ಈಸ್ಟ್ ನಲ್ಲಿ ಕನ್ನಡ ಉಳಿಯಲು ಹೇಗೆ ಸಾಧ್ಯ? ಕನ್ನಡಕ್ಕೆ ಇದು ಧಕ್ಕೆ ಬರುತ್ತದೆ. ಗ್ರೇಟರ್ ಬೆಂಗಳೂರು ಮಾಡುವುದರಿಂದ ಅಭಿವೃದ್ಧಿ ಹಿನ್ನಡೆ ಆಗುತ್ತದೆ. ಪೂರ್ವದಲ್ಲಿ ಐಟಿ ಬಿಟಿ ಇದೆ. ದಕ್ಷಿಣದಲ್ಲಿ ಆದಾಯ ಸಂಗ್ರಹ ಹೇಗೆ? ಆದಾಯವನ್ನು ಹಂಚಿಕೆ ಮಾಡುವುದು ಹೇಗೆ? ಎಂದು ಪ್ರಶ್ನಿಸಿದರು.




Related Articles

Leave a Reply

Your email address will not be published. Required fields are marked *

Back to top button