ರಾಜ್ಯ
Trending

ಅರ್ಹ ಪಲಾನುಭವಿಗಳಿಗಿಲ್ಲ ನಿವೇಶನ ಬಲಾಢ್ಯರಿಂದ ಒತ್ತುವರಿ: ಅಧಿಕಾರಿಗಳ ನಿರ್ಲಕ್ಷ್ಯದಿಂದ ದಲಿತರ ನಿವೇಶನ ಉಳ್ಳವರ ಪಾಲು..!

ಪಾವಗಡ: ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಾಸಲಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮ್ಮನಹಳ್ಳಿ ಗ್ರಾಮದ ಸ.ನಂ.108ರ 3-30 ಗುಂಟೆ ಜಮೀನಲ್ಲಿ ವಿಂಗಡಿಸಿರುವ ನಿವೇಶನಗಳ ಪೈಕಿ ದಲಿತರಿಗೆ ಮಂಜೂರು ಮಾಡಿರುವ ನಿವೇಶನಗಳು ಬಲಾಢ್ಯರಿಂದ ಒತ್ತುವರಿಯಾಗಿವೆ, ತೆರವುಗೊಳಿಸಲು ಅಧಿಕಾರಿಗಳಿಗೆ ದೂರು ನೀಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.ಹೌದು, ದಲಿತ ಸಮುದಾಯದವರಿಗೆ ಮೀಸಲಿಟ್ಟು ಮಂಜೂರು ಮಾಡಿರುವ ನಿವೇಶನಗಳು ಗ್ರಾಮದ ಸವರ್ಣೀಯರು ಮತ್ತು ಗ್ರಾಮದಲ್ಲಿ ವಾಸ್ತವ್ಯ ದಾಖಲೆಯೇ ಇಲ್ಲದ ಬೇರೆ ಗ್ರಾಮದವರೂ ಒತ್ತುವರಿ ಮಾಡಿಕೊಂಡಿದ್ದಾರಂತೆ.ಸರ್ಕಾರ ಪ್ರತಿ ಬಜೆಟ್ ನಲ್ಲಿ ವಸತಿ ರಹಿತರಿಗೆ ಕೋಟ್ಯಂತರ ಹಣ ಮೀಸಲಿಡುತ್ತಿದೆ. ಆದರೆ, ಆ ಯೋಜನೆ ಬಡವರ ಕೈಸೇರದೆ ಉಳ್ಳವರ ಪಾಲಾಗುತ್ತಿದೆ.

ಮುಖ್ಯವಾಗಿ ಉಳ್ಳವರೇ ಬಡವರ ಯೋಜನೆಗೆ ಕನ್ನ ಹಾಕುತ್ತಿದ್ದಾರಂತೆ, ಆದರೆ ಯಾರ ಕೈವಾಡದಿಂದ ಸರ್ಕಾರದ ಯೋಜನೆ ಉಳ್ಳವರಿಗೆ ಸಿಕ್ತಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.ಕೆಲವರು ಸೂರಿಗಾಗಿ ಪ್ರತಿ ವರ್ಷ ಅರ್ಜಿ ಹಾಕಿದರೂ ಮನೆ ಸಿಗುತ್ತಿಲ್ಲ. ಆಶ್ರಯ ಯೋಜನೆಯಡಿ ನಿವೇಶನ ಮಂಜೂರಾಗಿದ್ದರೂ ಬಲಾಢ್ಯರ ಒತ್ತುವರಿಯಿಂದ ಅರ್ಹ ಪಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ತಲುಪದೇ ತೊಂದರೆ ಅನುಭವಿಸುತ್ತಿದ್ದಾರೆ.ನೈಜ ಪಲಾನುಭವಿಗಳು ಮನೆಗಾಗಿ ಗ್ರಾ.ಪಂ.ಕಛೇರಿಗೆ ಹೋದರೂ ಯಾವುದೇ ಪ್ರಯೋಜನವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯುವ ಮುಖಂಡ ರಘು ಮಾತನಾಡಿ, ಕೆಂಚಮ್ಮನಹಳ್ಳಿ ಗೇಟ್ ಬಳಿ ದಲಿತ ಸಮುದಾಯದ ನಿವೇಶನ ರಹಿತರಿಗೆ ಮಂಜೂರು ಮಾಡಿರುವ ನಿವೇಶನಗಳು ಉಳ್ಳವರು ಒತ್ತುವರಿ ಮಾಡಿಕೊಂಡು ಮನೆಗಳನ್ನು ಸಹ ಕಟ್ಟಿರುತ್ತಾರೆ. ಕಳೆದ 3 ವರ್ಷಗಳ ಹಿಂದೆಯೇ ತೆರವುಗೊಳಿಸಲು ದೂರು ಸಲ್ಲಿಸಿದರೂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ವಿನಹ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಒತ್ತುವರಿ ತೆರವುಗೊಳಿಸಲು ಕ್ರಮವಹಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಒಟ್ಟಿನಲ್ಲಿ ಬಡವರ ಏಳಿಗೆಗಾಗಿ ಇರಬೇಕಾದ ಸರ್ಕಾರದ ವಸತಿ ಯೋಜನೆ ಸದ್ಯ ಸೋಲಾರ್ ನಾಡಿನಲ್ಲಿ ಉಳ್ಳವರ ಪಾಲಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ನೈಜ ಪಲಾನುಭವಿಗಳನ್ನು ಗುರ್ತಿಸಿ ಒತ್ತುವರಿ ತೆರವುಗೊಳಿಸಿ ವಸತಿ ರಹಿತರಿಗೆ ಮನೆಗಳು ಮಂಜೂರು ಮಾಡಲು ಮುಂದಾಗಬೇಕಿದೆ.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಕನ್ನಮೇಡಿ ಕೃಷ್ಣಮೂರ್ತಿ, ಮಂಗಳವಾಡ ಹನುಮಂತರಾಯ, ಮಾಜಿ ಗ್ರಾ.ಪಂ.ಅಧ್ಯಕ್ಷೆ ಇಂದ್ರಮ್ಮ, ಶಿವಣ್ಣ, ಈರಣ್ಣ, ಆಂಜನೇಯ, ಭವ್ಯ, ಪಾಪಮ್ಮ, ಲಕ್ಷ್ಮೀದೇವಿ, ಗಂಗಮ್ಮ, ಅನಸೂಯಮ್ಮ, ರತ್ನಮ್ಮ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button