ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ

ಚನ್ನಪಟ್ಟಣ: ಪಟ್ಟಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಹಳೆಯ ಪೈಪ್ಗಳ ಬದಲಾವಣೆ, ಸಿಸಿ ಡ್ರೈನ್, ಕಾಂಕ್ರೀಟ್ ರಸ್ತೆ ಹಾಗೂ ಇನ್ನೂ ವಿವಿಧ ಅಭಿವೃದ್ಧಿಗಾಗಿ ಪ್ರತಿ ವಾರ್ಡ್ಗೆ ೧ ಕೋಟಿ ೪೭ಲಕ್ಷ ಅನುದಾನ ಬಿಡುಗಡೆಯಾಗಿದ್ದು ಈ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ೯, ೧೦, ೧೧, ೨೩, ಮತ್ತು ೨೯ನೇ ವಾರ್ಡ್ಗಳಲ್ಲಿ ಭೂಮಿ ಪೂಜೆ ಮಾಡಿ ನಂತರ ಮಾತನಾಡಿದ ಅವರು ಪಟ್ಟಣದಲ್ಲಿ ಈಗಾಗಲೇ ಕುಡಿಯುವ ನೀರಿಗಾಗಿ ಅಳವಡಿಸಿರುವ ಪೈಪ್ಗಳು ತುಂಬ ವರ್ಷಗಳಿಂದ ಹಳೆಯದಾಗಿದ್ದು, ಇದರಿಂದ ಕಸ ಕಡ್ಡಿಗಳು ಶೇಖರಣೆಯಾಗಿ ನೀರು ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬಿರುತ್ತದೆ ಹಾಗಾಗಿ ಮೊದಲಿಗೆ ಕುಡಿಯು ನೀರಿನ ಪೈಪ್ಗಳ ಬದಲಾವಣೆ ಮಾಡಲಾಗುವುದು ಇದಕ್ಕಾಗಿ ಬೆಳಗಾವಿ ಅದಿವೇಶನ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್ ಅವರಲ್ಲಿ ಮನವಿ ಮಾಡಲಾಗಿತ್ತು, ಅದರಂತೆ ಈಗ ಸುಮಾರು ೨೦ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಪಟ್ಟಣದಾದ್ಯಂತ ಪೈಪ್ಲೈನ್ ಬದಲಾವಣೆ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲಾಗುವುದು, ಇನ್ನೂ ಉಳಿದಂತೆ ನಗರದ ಅಭಿವೃದ್ಧಿಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಾದ, ಸಿಸಿ ಡ್ರೈನ್ ನಿರ್ಮಾಣ, ಕಾಂಕ್ರೀಟ್ ರಸ್ತೆ ಹಾಗೂ ಇನ್ನೂ ವಿವಿಧ ಅಭಿವೃದ್ಧಿಗೆ ಚಾಲನೆ ನೀಡಿ ನಗರವನ್ನೇ ಬದಲಾವಣೆ ಮಾಡಲಾಗುವುದು ಎಂದರು.
ಈಗಾಗಲೇ ಪಟ್ಟಣದಲ್ಲಿ ಗ್ಯಾಸ್ಲೈನ್ ಕಾಮಗಾರಿ ನಡೆಯುತ್ತಿದ್ದು, ಇದರ ಜೊತೆಗೆಯೇ ಕುಡಿಯುವ ನೀರಿನ ಪೈಪ್ಗಳನ್ನು ಬದಲಾವಣೆ ಮಾಡುವ ಕೆಲಸವನ್ನು ಎರಡು ಒಟ್ಟಿಗೆ ಮಾಡಲು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಕಾಮಗಾರಿ ಮುಗಿದ ನಂತರ ಸಿಸಿ ಡ್ರೈನ್ ಹಾಗೂ ರಸ್ತೆ ಡಂಭಾರೀಕರಣವನ್ನು ಮುಗಿಸಲಾಗುವುದು ಎಂದರು.
ಯುಜಿಡಿ ಕಾಮಗಾರಿಯೂ ಇನ್ನೂ ೬ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದು, ಈಗಾಗಲೇ ವಾರ್ಡ್ಗಳಲ್ಲಿ ದೂಳು ತುಂಬಿಕೊಂಡು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರು ಸಂಚಾರಕ್ಕೆ ತುಂಬ ತೊಂದರೆಯಾಗುತ್ತಿದ್ದು, ಸದ್ಯಕ್ಕೆ ಪಟ್ಟಣದಲ್ಲಿರುವ ಬಹುತೇಕ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ಓಡಾಡಲು ತೊಂದರೆ ತಪ್ಪುತ್ತದೆ. ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ರೀತಿಯ ಪತ್ರವ್ಯವಹಾರಗಳು ಮುಗಿದಿದ್ದು,
ಸದ್ಯಕ್ಕೆ ಜಾಗದ ಸಮಸ್ಯೆ ಇತ್ತು, ನಗರಸಭೆಯಿಂದ ಭೂಸ್ವಾದೀನ ಪ್ರಕ್ರಿಯೆಯೂ ಮುಗಿಯುವ ಹಂತದಲ್ಲಿ ಇದೆ. ಜೊತೆಗೆ ಯುಜಿಡಿ ಕಾಮಗಾರಿಗೆ ಹಣದ ಕೊರತೆ ಬರದಂತೆ ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದರು.
ನಗರಸಭೆ ಅಧ್ಯಕ್ಷ ವಾಸಿಲ್ ಆಲಿ ಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ನಗರಸಭೆ ಸದಸ್ಯರಾದ ನಾಗೇಶ್, ಜಯಮಾಲ, ರೇವಣ್ಣ, ಸತೀಶ್ ಬಾಬು, ಭಾನುಪ್ರಿಯ, ಪೌರಯುಕ್ತ ಎಂ.ಮಹೇಂದ್ರ, ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಪ್ರಮೋದ್, ನಗರ ಅಧ್ಯಕ್ಷ ಸುನೀಲ್ ಕುಮಾರ್, ಮುಖಂಡರಾದ ಆರ್.ಎಂ.ಮಲವೇಗೌಡ, ರಾಂಪುರ ಲೋಕೇಶ್, ಆಶ್ರಯ ಸಮಿತಿ ಸದಸ್ಯ ಹಾಗೂ ಅಲ್ಪಸಂಖ್ಯಾತರ ಗ್ರಾಮಾಂತರ ಅಧ್ಯಕ್ಷ ಇಬ್ರಾಹಿಂಖಾನ್, ಕೆ.ಎಲ್.ಕುಮಾರ್, ಕೇಬಲ್ ಮಂಜು, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.



