ಶಾಸ್ತ್ರೀಯ ಹಾಗೂ ನೃತ್ಯ ಘಟಕದ ಅಧ್ಯಕ್ಷರಾಗಿ ಶ್ರೀಯುತ ಅನಂತ ವಿಕ್ರಮ್ ನೇಮಕ..
ಮಲ್ಲೇಶ್ವರಂ ಸೇವಾಸಧನ ಸಭಾಂಗಣದಲ್ಲಿ ‘ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಡಾ. ಶಿವಕುಮಾರ್ ನಾಗರ ನವಿಲೆಯವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಇದೇ ವೇದಿಕೆಯಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಶಾಸ್ತ್ರೀಯ ಹಾಗೂ ನೃತ್ಯ ಘಟಕದ ಅಧ್ಯಕ್ಷರನ್ನಾಗಿ ಶ್ರೀಯುತ ಅನಂತ ವಿಕ್ರಮ್ ರವರನ್ನು ನೇಮಕ ಮಾಡಿ,ಆದೇಶ ಪತ್ರ ನೀಡಿ, ಮಾತನಾಡಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು. ಅನಂತ ವಿಕ್ರಮ್ ರವರು ಸುಮಾರು ಇಪ್ಪತ್ನಾಲ್ಕು ವರ್ಷಗಳಿಂದ ಸಂಗೀತ ಮತ್ತು ಭರತನಾಟ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುತ್ತಾರೆ. ‘ಶೈಲೂಷಂ ಆರ್ಟ್ಸ್ ಅಂಡ್ ಕ್ರಿಯೇಷನ್’ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿ, ವಿಶೇಷ ಚೇತನ ಮಕ್ಕಳಿಗೆ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿರುತ್ತಾರೆ. ಚಿನ್ನರ ಕಲರವ, ಯುವ ಕಲೋತ್ಸವ ಹೀಗೆ ಹಲವಾರು ಯಶಸ್ವಿ ಕಾರ್ಯಕ್ರಮಗಳ ಜೊತೆಗೆ ಸಮಾಜ ಸೇವೆಯನ್ನು ಮಾಡಿರುತ್ತಾರೆ.ಇವರ ಅಪಾರ ಸಾಧನೆಗಳನ್ನು ಪರಿಗಣಿಸಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಶಾಸ್ತ್ರೀಯ ಹಾಗೂ ನೃತ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸ್ತ್ರೀಯ ಹಾಗೂ ನೃತ್ಯ ಕ್ಷೇತ್ರಕ್ಕೆ ಸಂಬಂಧ ಪಟ್ಟ ಕಲಾವಿದರನ್ನು ಹೊರ ಜಗತ್ತಿಗೆ ಪರಿಚಯಿಸುತ್ತಾ, ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೀರಾ ಎಂದು ಭಾವಿಸುತ್ತೇನೆ. ನಮ್ಮ ಸಂಸ್ಥೆ ಕೂಡ ನಿಮ್ಮ ಬೆನ್ನೆಲುಬಾಗಿ ನಿಂತು ಕಲಾವಿದರಿಗೆ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳನ್ನು ಕಲ್ಪಿಸಿಕೊಡಲಾಗುವುದು. ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ನಿಮ್ಮದಾಗಲಿ ಎಂದು ಹಾರೈಸಿದರು..

ಈ ಸುಂದರ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅನಂತ ವಿಕ್ರಮ್ ರವರು ಪ್ರತ್ಯಕ್ಷ ಪರಿಕರಗಳೊಂದಿಗೆ ಮಾಡಿರುವುದು ವಿಶೇಷ ಹಾಗೂ ವಿಭಿನ್ನವಾಗಿತ್ತು. ವೀಕ್ಷಕರು ತದೇಕ ಚಿತ್ತದಿಂದ ಕಾರ್ಯಕ್ರಮದಲ್ಲಿ ಮಗ್ನರಾಗಿರಾಗಿದ್ದರು. ಯಾರೂ ಕೂಡ ಮೊಬೈಲ್ ಗೋಜಿಗೆ ಹೋಗದೆ, ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಅದರಲ್ಲೂ ಕುಮಾರಿ ವರುಣಿ ಎಂಬ ಕಲಾವಿದೆಯ ಭರತನಾಟ್ಯ ಎಲ್ಲರ ಗಮನ ಸೆಳೆದಿತ್ತು, ಅದೆಂತಹ ಹಾವಭಾವ, ಕಲಾ ದೇವಿಯೇ ಈ ಮಗುವನ್ನು ಆವರಿಸಿದಂತಿತ್ತು. ಕಿಂಚಿತ್ತೂ ದೋಷವಿಲ್ಲದ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. . ಅರ್ಚನಾ, ಕೃಪಾ ಶೆಟ್ಟಿ, ಲಕ್ಷ್ಮಿ ರೇಖಾ ಅರುಣ್ ಇನ್ನೂ ಮುಂತಾದ ಕಲಾವಿದರ ಗಾಯನ, ನೃತ್ಯ ಆಕರ್ಷಣೀಯವಾಗಿತ್ತು. ಭವಾನಿ ಶಂಕರ್, ದೀಪಕ್ ಹೆಬ್ಬಾರ್, ಅರುಣ್ ಕುಮಾರ್, ಅಪರ್ಣ ರವೀಂದ್ರ ರವರ ವಾದ್ಯಗೋಷ್ಠಿ ಮನಮೋಹಕವಾಗಿತ್ತು.
ಈ ಸಂದರ್ಭದಲ್ಲಿ ಶೇಷಾದ್ರಿ ಅಯ್ಯಂಗಾರ್, ಹಿರಿಯ ಪತ್ರಕರ್ತರಾದ ಲೆಪಾಕ್ಷಿ ಸಂತೋಷ್ ರಾವ್, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಾಂಸ್ಕೃತಿಕ ಘಟಕದ ಅಧ್ಯಕ್ಷ ನವೀನ್ ಕುಮಾರ್, ಸೌಭಾಗ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.



