
ಚಾಮರಾಜನಗರ ಜಿಲ್ಲಾ ಕೇಂದ್ರದ ನಗರಸಭೆ ನೇರ ಪಾವತಿ ಪೌರ ಕಾರ್ಮಿಕರ ಜೀವನ ದುಸ್ತರವಾಗಿದೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ದೂರು ನೀಡಲು ಬಂದಿದ್ದ ನಗರಸಭೆಯ ಪೌರಸೇವ ನೇರ ಪಾವತಿ ಕಾರ್ಮಿಕರನ್ನು ಅಪರ ಜಿಲ್ಲಾಧಿಕಾರಿಗಳು ತಡೆದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜು ರವರನ್ನು ಕರೆದು ಛೀಮಾರಿ ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೆಲ್ಲಾ ಮೂಕ ಪ್ರೇಕ್ಷಕರಾಗಿ ನಿಂತು ಏನು ಅರಿಯದಂತೆ ಇಲಾಖಾ ಅಧಿಕಾರಿಯ ಪರವಾಗಿ ನಿಂತ ಯೋಜನಾ ನಿರ್ದೇಶಕರು ಪ್ರಕರಣದ ಗಂಭೀರತೆಯನ್ನು ತಿಳಿಯದೆ ತಿಳಿ ಹೇಳಿ ಕಳಿಸಿದ್ದಾರೆ.ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುರವರು ನೇರ ಪಾವತಿ ಪೌರ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದು ನೌಕರರ ಸ್ವಂತ ರಕ್ತ ಸಂಬಂಧಿಗಳ ಜನನ ಅಥವಾ ಮರಣ ಕಾರ್ಯಕ್ರಮಕ್ಕೆ ರಜೆ ನೀಡದೆ ತಮಗೆ ಬೇಕಾದ ನೌಕರರಿಗೆ ಅವರ ವೈಯಕ್ತಿಕ ಕೆಲಸ ಮಾಡಿಕೊಡುವ ನೌಕರರನ್ನು ಹೊರತು ಪಡಿಸಿ ರಜೆ ನೀಡದೆ ಸತಾಯಿಸುವುದು , ಕುಲ ಭಾಂದವರ ಅಂತ್ಯಸಂಸ್ಕಾರ ಕ್ರಿಯೆಗೆ ಹೋದರೆ ಅರ್ಧ ರಜೆ ನೀಡದೆ ಪೂರ್ಣ ರಜೆ ಹಾಕುವುದು , ಸಮುದಾಯದವರ ಹೆಸರು ಹೇಳಿ ಬೆದರಿಸುವುದು ಅಲ್ಲದೆ ಸೇವಾ ಜೇಷ್ಟತೆ ಬಗ್ಗೆ ಕೇಳಿದರೆ ನೀಡದೆ ಸತಾಯಿಸುವುದೂ ಹೀಗೆ ದಿನನಿತ್ಯ ದೌರ್ಜನ್ಯ ಮಾಡುತ್ತಿದ್ದಾರೆ.
ಸರಿ ಸುಮಾರು 5 ವರ್ಷಗಳಿಗೂ ಹೆಚ್ಚಿನ ಕಾಲದಿಂದಲೂ ಚಾಮರಾಜನಗರ ನಗರಸಭೆಯಲ್ಲಿ ಪ್ರಸ್ತುತ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರ ಸೋದರನಾಗಿದ್ದು ಸ್ಥಳೀಯ ಶಾಸಕರ ಕೃಪಾ ಕಟಾಕ್ಷದಿಂದ ಇಲ್ಲಿಯೇ ಗಟ್ಟಿಯಾಗಿ ನೆಲೆ ಊರಿದ್ದು ಪೌರ ಕಾರ್ಮಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾನೆ. ಈತನ ಹಿಟ್ಲರ್ ದರ್ಬಾರಿಗೆ ಹೆದರಿ ಹಲವು ಸಮುದಾಯದ ಯುವಕರು ಕೆಲಸ ಬಿಟ್ಟು ಹೋಗಿದ್ದಾರೆ. ಪ್ರತಿ ದಿನದ ಹಾಜರಾತಿಯನ್ನು ಅದೇ ದಿನದಂದು ನಮೂದಿಸದೆ ಒಟ್ಟಿಗೆ ಕುಳಿತು ತಿಂಗಳಿಗೊಮ್ಮೆ ತಮಗೆ ಬೇಕಾದವರಿಗೆ ನೀಡಿ ಇದರ ವಿರುದ್ಧ ಧನಿಯೆತ್ತಿದವರನ್ನು ಹಾಜರಾತಿ ನೀಡದೆ ಹೆದರಿಸುತ್ತಾನೆ. ಬೆಳಿಗೆ ಹಾಜರಾತಿಗೆ ಆಗೊಮ್ಮೆ ಈಗೊಮ್ಮೆ ಬರುವ ಇವರು ಸಂಪೂರ್ಣ ಕೆಲಸವನ್ನು ಮೇಸ್ತ್ರಿಗಳಿಂದಲೇ ಮಾಡಿಸಿ ಕೂತಲ್ಲಿಯೇ ಕೆಲಸ ಮಾಡಿಸುತ್ತಾನೆ. ವಾಡ್೯ವಾರು ಕೆಲಸಕ್ಕೆ ಕಳುಹಿಸದೆ ತಮ್ಮ ವಿರುದ್ಧ ತಿರುಗಿ ಬೀಳುವ ನೌಕರರನ್ನು ಗುರಿಯಾಗಿಸಿ ಬೇಕಂತಲೇ ಬೇರೆ ಗ್ಯಾಂಗ್ ಕೆಲಸ ಹಾಗೂ ಟ್ರಾಕ್ಟರ್ ಕಸ ತುಂಬಲು ನಿಯೋಜಿಸಿ ಇತ್ತ ಸದಸ್ಯರಿಂದ ಕೆಲಸಕ್ಕೆ ಬಂದಿಲ್ಲವೆಂದು ಬಿಂಬಿಸಿ ತಮ್ಮ ದ್ವೇಷ ಸಾಧಿಸಿದ್ದಾನೆ.
ಇದರ ಜೊತೆ ತಮ್ಮ ಸಹೋದ್ಯೋಗಿ ಮಹಿಳಾ ನೌಕರರ ಮುಂದೆ ಧಮಕಿ ಹಾಕುವುದು ಹೆದರಿಸುವುದು ಮತ್ತು ಸಮುದಾಯದ ನಾಯಕರುಗಳ ಮುಂದೆ ಇಲ್ಲ ಸಲ್ಲದ ಆರೋಪಗಳನ್ನು ನಮ್ಮ ಮೇಲೆ ಹೊರಿಸಿ ಅವರನ್ನು ಶಾಶ್ವತ ನೌಕರನ್ನಾಗಿ ತೆಗೆದುಕೊಳ್ಳುವುದು ಕಷ್ಟ ಎಂದು ಬಿಂಬಿಸಿ ಭಯ ಭೀತರನ್ನಾಗಿಸುವುದು ಹೀಗೆ ಹಲವಾರು ಬಗೆಯ ಕಿರುಕುಳ ನೀಡಿರುವ ಬಗ್ಗೆ ಖುದ್ದು ಪೌರ ಕಾರ್ಮಿಕರೇ ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ಬಂದರೆ ಅಪರ ಜಿಲ್ಲಾಧಿಕಾರಿಗಳು ಯೋಜನಾ ನಿರ್ದೇಶಕರ ಬಳಿ ಕಳುಹಿಸಿ ಮತ್ತೆ ನೌಕರರು ಭಯದಿಂದ ಕೆಲಸ ಮಾಡುವಂತಾಗಿದೆ.
ಈಗ ದೂರು ನೀಡಿರುವ ಎಲ್ಲಾ ನೇರ ಪಾವತಿ ಪೌರ ಸೇವಾ ನೌಕರರನ್ನು ಗುರಿಯಾಗಿಸಿ ಮತ್ತೆ ಇವರನ್ನೆಲ್ಲಾ ಬಲಿಪಶುಗಳಾಗಿದ್ದಾರೆ. ಸದರಿ ಆರೋಗ್ಯ ನಿರೀಕ್ಷಕರು ತಮಗೆ ಬೇಕಾದಂತೆ ದರ್ಪದಿಂದ ಕರ್ತವ್ಯ ನಿರ್ವಹಿಸುತ್ತಿದ್ದು ಬೆಳಗಿನ ಉಪಹಾರವನ್ನು ಸ್ಥಳೀಯ ನಗರಸಭೆ ಸದಸ್ಯರ ಪತಿಯ ಜೊತೆ ಸೇರಿ ಪೌರಕಾರ್ಮಿಕರಿಗೆ ಕಳಪೆ ಆಹಾರ ನೀಡಿ ಸರಿಯಾದ ಜಾಗದಲ್ಲಿ ಇಡದೆ ನೀರು ಸರಬರಾಜು ಟ್ಯಾಂಕ್ ಬಳಿ ನೀಡಿರುವ ಬಗ್ಗೆ ಈಗಾಗಲೇ ಮಾದ್ಯಮಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ವರದಿ ಆಗಿದ್ದು ಇವರ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ.
ಕಸ ವಿಲೇವಾರಿ ಆಟೋ ಚಾಲಕರಾಗಿ ನೇಮಿಸಿರುವ 8 ಜನ ನೌಕರರನ್ನು ತಮಗೆ ಆದಾಯ ಬರುವ ಜಾಗಗಳಾದ ಇಸ್ವತ್ತು ಮುದ್ರಣದಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ , ಆರೋಗ್ಯ ಶಾಖೆಯಲ್ಲಿ , ಘನತ್ಯಾಜ್ಯ ನಿರ್ವಹಣೆಯ ಘಟಕದಲ್ಲಿ ಹೀಗೆ ತಮಗೆ ಬೇಕಾದವರನ್ನು ಬೇಕಾದ ಕಡೆ ಕೂರಿಸಿ ವಸೂಲಿಗೆ ಇಳಿದಿರುವುದು ಗೌಫ್ಯವಾಗಿ ಉಳಿದಿಲ್ಲ.
ಆದರೂ ಇಂತಹ ಅಧಿಕಾರಿಯನ್ನು ಇಲ್ಲಿಯೇ ಉಳಿಸಿ ಪೌರ ಕಾರ್ಮಿಕರ ರಕ್ತ ಹೀರುವ ಈ ಸ್ಥಿತಿಗೆ ನಗರಸಭೆಯ ಸದಸ್ಯರುಗಳು ಸಹ ಸೊಲ್ಲೆತ್ತದೆ ಇರುವುದನ್ನು ನೋಡಿದರೆ ಈ ಅಧಿಕಾರಿ ಎಷ್ಟು ರಾಜಕೀಯ ಪ್ರಭಾವಿತರಾಗಿರಬಹುದು. ಇನ್ನಾದರೂ ಹಗಲಿರುಳು , ಪಟ್ಟಣದ ಇಡೀ ದುರ್ವಾಸನೆಯ ಅನೈರ್ಮಲ್ಯ ಕಸವನ್ನು ವಿಲೇವಾರಿ ಮಾಡಿ ಪಟ್ಟಣವನ್ನು ಸ್ವಚ್ಚ ನಗರವನ್ನಾಗಿ ಮಾಡುವ ಪೌರಕಾರ್ಮಿಕರ ಮೇಲಿನ ದಬ್ಬಾಳಿಕೆಯ ವಿರುದ್ಧ ಕ್ರಮ ಕೈಗೊಂಡು ಪೌರ ಕಾರ್ಮಿಕರ ಮುಕ್ತ ಹಾಗೂ ಮುಗ್ದ ಮನಸುಗಳ ಮೇಲೆ ಸವಾರಿ ಮಾಡದ ಮಾನವೀಯ ಮೌಲ್ಯ ಉಳ್ಳ ಬದಲಿ ಆರೋಗ್ಯ ನಿರೀಕ್ಷಕರನ್ನು ಪಟ್ಟಣಕ್ಕೆ ನಿಯೋಜಿಸಬೇಕೆಂದು ಪೌರಕಾರ್ಮಿಕರ ಆಶಯ ಹಾಗೂ ಒತ್ತಡವಾಗಿದೆ.



