ಹೊಸ ಅಶ್ವಮೇಧ ಬಸ್ಸುಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣ: ಕೆಎಸ್ಆರ್ಟಿಸಿ ಘೋಷಣೆ
ಬೆಂಗಳೂರು, ಫೆಬ್ರವರಿ 5: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸದಾಗಿ ಆರಂಭಿಸುತ್ತಿರುವ ಅಶ್ವಮೇಧ ಬಸ್ಸುಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದಾಗಿ ಘೋಷಣೆ ಮಾಡಲಾಗಿದೆ. ಕೆಎಸ್ಆರ್ಟಿಸಿಗೆ ಒಟ್ಟು ಸಾವಿರ ಹೊಸ ಬಸ್ಗಳು ಬರಲಿದ್ದು, ಮೊದಲ ಹಂತದಲ್ಲಿ ನೂರು ಹೊಸ ಕ್ಲಾಸಿಕ್ ಬಸ್ಗಳು ಬಂದಿವೆ. ಬಣ್ಣ ಬಣ್ಣದ ಬಗೆ ಬಗೆಯ ಹೂವುಗಳಿಂದ ಸಿಂಗಾರಗೊಂಡಿರುವ ಅಶ್ವಮೇಧ ಬಸ್ಗಳಿಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೆಲವೇ ಕ್ಷಣದಲ್ಲಿ ಚಾಲನೆ ನೀಡಲಿದ್ದಾರೆ.
ಅಶ್ವಮೇಧ ಬಸ್ಗೆ ಚಾಲನೆ ನೀಡುವ ಸಮಾರಂಭದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಹ ಹಾಜರಿದ್ದಾರೆ.
ಅಶ್ವಮೇಧ ಕ್ಲಾಸಿಕ್ ಬಸ್ ವಿಶೇಷತೆಗಳೇನು?
ಸದ್ಯ ಕಾರ್ಯಾರಂಭ ಮಾಡುತ್ತಿರುವ ನೂರು ಅಶ್ವಮೇಧ ಕ್ಲಾಸಿಕ್ ಬಸ್ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮರಾ, ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ. 52 ಸೀಟು, ಬಸ್ಸಿನ ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಪ್ರಯಾಣಿಕರು ಲಗೆಜ್ ಇಡಲು ದೊಡ್ಡದಾದ ಸ್ಥಳದ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕೇಂದ್ರಗಳಿಗೆ ಸಂಪರ್ಕ
ಅಶ್ವಮೇಧ ಕ್ಲಾಸಿಕ್ ಬಸ್ಗಳು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಿಂದ ರಾಜಧಾನಿಗೆ ಸಂಪರ್ಕ ಕಲ್ಪಿಸುವ ಪಾಯಿಂಟ್ ಟೂ ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ಸುಗಳಾಗಿವೆ. ಮಹಿಳೆಯರು ಈ ಬಸ್ಸುಗಳಲ್ಲೂ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಅಶ್ವಮೇಧ ಬಸ್ಗಳಲ್ಲೂ ಉಚಿತದ ಗ್ಯಾರಂಟಿ!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಚುನಾವಣಾ ಪೂರ್ವ ನೀಡಿದ್ದ ಭರವಸೆಯಂತೆ ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿಗೊಳಿಸಿತ್ತು. ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್, ಅಂಬಾರಿಯಂಥ ವಿಶೇಷ ಬಸ್ಗಳನ್ನು ಹೊರತುಪಡಿಸಿ ಇತರ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲಾಗಿದೆ. ಅದರಂತೆ, ಇದೀಗ ಅಶ್ವಮೇಧ ಬಸ್ಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಘೋಷಣೆ ಮಾಡಲಾಗಿದೆ.
ಸದ್ಯ ನೂರು ಬಸ್ಗಳಿಗೆ ಚಾಲನೆ ನೀಡಲಾಗಿದ್ದು, ಇವು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಕಾರ್ಯಾಚರಣೆ ಆರಂಭಿಸಲಿವೆ. ಮುಂದಿನ ದಿನಗಳಲ್ಲಿ ಒಟ್ಟು ಸಾವಿರ ಅಶ್ವಮೇಧ ಬಸ್ಗಳು ಕೆಎಸ್ಆರ್ಟಿಸಿಗೆ ಬರಲಿದ್ದು, ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಲಿವೆ.



