₹7 ಕೋಟಿ ಅಕ್ರಮ ಹಣ ವರ್ಗಾವಣೆ; ಆರೋಪಿ ಸೆರೆ

ಬೆಂಗಳೂರು: ಸ್ನೇಹಿತನಿಗೆ ಸಹಾಯ ಮಾಡಲು ಹೋಗಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸೈಬರ್ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾನೆ. ಸ್ನೇಹಿತನ ಮೂಲಕ ವಿದ್ಯಾರ್ಥಿಯೋರ್ವನ ಬ್ಯಾಂಕ್ ಖಾತೆ ಪಡೆದ ಸೈಬರ್ ಖದೀಮರು ಸುಮಾರು 7 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಉತ್ತರ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿ ನೀಡಿದ ಮೇರೆಗೆ 23 ವರ್ಷದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವರ: ದೂರುದಾರ ವಿದ್ಯಾರ್ಥಿಗೆ ಆರೋಪಿಯು ಕಳೆದ ಒಂದು ವರ್ಷದಿಂದ ಸ್ನೇಹಿತನಾಗಿದ್ದ. ವಿದ್ಯಾರ್ಥಿಯು ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆ ಹೊಂದಿದ್ದ. ಕಳೆದ ನವೆಂಬರ್ನಲ್ಲಿ ಆರೋಪಿಯು ತನ್ನ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದ ಪರಿಣಾಮ ಬ್ಲಾಕ್ ಆಗಿದ್ದು, ನಿನ್ನ ಬ್ಯಾಂಕ್ ಖಾತೆಯನ್ನು ಕೊಡು ಎಂದು ಕೇಳಿದ್ದ. ಇದಕ್ಕೊಪ್ಪಿದ ವಿದ್ಯಾರ್ಥಿಯು ಪಾಸ್ಬುಕ್, ಎಟಿಎಂ ಕಾರ್ಡ್, ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಸಿಮ್ ಕಾರ್ಡ್, ನೆಟ್ ಬ್ಯಾಂಕಿಂಗ್, ಯೂಸರ್ ಐಡಿ ಹಾಗೂ ಪಾಸ್ವರ್ಡ್ಗಳನ್ನು ಅಂಚೆ ಮೂಲಕ ಕಳುಹಿಸಿದ್ದ. ಈ ಬಗ್ಗೆ ವಾಟ್ಸ್ಆ್ಯಪ್ ಮೂಲಕ ಆರೋಪಿ ಕಳುಹಿಸಿರುವುದಾಗಿ ಸಂದೇಶ ರವಾನಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
7 ಕೋಟಿ ಹಣ ವರ್ಗಾವಣೆ: ಬ್ಯಾಂಕ್ ಖಾತೆ ವಿವರ ನೀಡಿದ ಬಳಿಕ ಇತ್ತೀಚೆಗೆ ದೂರುದಾರ ವಿದ್ಯಾರ್ಥಿಗೆ ಬ್ಯಾಂಕ್ ಅಧಿಕಾರಿಗಳು ಕರೆ ಮಾಡಿ, ಸೈಬರ್ ವಂಚನೆ ಎಸಗಿ 7 ಕೋಟಿ ರೂ. ಹಣ ನಿಮ್ಮ ಖಾತೆಗೆ ಬಂದಿದೆ. ಈ ಸಂಬಂಧ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಬ್ಯಾಂಕ್ ಖಾತೆ ನೀಡಿದ ಸ್ನೇಹಿತ ಸೇರಿದಂತೆ ಇನ್ನಿತರರು ಸೇರಿಕೊಂಡು ಬ್ಯಾಂಕ್ ಖಾತೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಂದು ದೂರಿನಲ್ಲಿ ವಿದ್ಯಾರ್ಥಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು, ವಿದ್ಯಾರ್ಥಿಯ ಸ್ನೇಹಿತನನ್ನು ಬಂಧಿಸಿದ್ಧಾರೆ. ಆರೋಪಿಯು ಇದೇ ರೀತಿ ಟೆಲಿಗ್ರಾಂ ಆ್ಯಪ್ ಮೂಲಕ ಹಲವರನ್ನು ಸಂಪರ್ಕಿಸಿ, ಅಮಾಯಕರಿಂದ ಬ್ಯಾಂಕ್ ಖಾತೆ ವಿವರ ಪಡೆದು ಸೈಬರ್ ವಂಚಕರಿಗೆ ನೀಡುತ್ತಿದ್ದ ಎಂಬ ವಿಚಾರ ತನಿಖೆ ವೇಳೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.



