ರಾಜ್ಯ
Trending

ಮನೆಯೊಳಗೆ ನುಗ್ಗಿದ ನೀರು ಮಣ್ಣು, ಓಡಿಹೋಗಿ ಬಚಾವಾದ ಜನ

ಮುಂಗಾರು ಮಹಾ ಮಳೆಗೆ (Mangaluru Rains) ಮಂಗಳೂರು ಅಕ್ಷರಶಃ ತತ್ತರಿಸಿಹೋಗಿದೆ. ಮಂಗಳೂರು ನಗರ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭೂಕುಸಿತ (Landslide) ಸಂಭವಿಸಿ ಮನೆಗಳಿಗೆ ಹಾನಿಯಾಗಿದೆ. ಮಂಗಳೂರು ಸಮೀಪದ ಕಣ್ಣೂರಿನ (Kannur) ದಯಂಬು ಎಂಬಲ್ಲಿ ಗುಡ್ಡ ಕುಸಿತದಲ್ಲಿ ಕುಟುಂಬವೊಂದು ಕೂದಲೆಲೆ ಅಂತರದಲ್ಲಿ ಪಾರಾಗಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯಲ್ಲಿ ವಾಸವಿದ್ದ ಕುಟುಂಬದವರು, ಗುಡ್ಡ ಕುಸಿತದ ಸದ್ದು ಕೇಳುತ್ತಿದ್ದಂತೆಯೇ ಓಡಿಹೋಗಿ ಬಚಾವಾಗಿದ್ದಾರೆ.ಭಾರಿ ಮಳೆಯ ಕಾರಣ ಜಲಪಾತದಂತೆ ನೀರು ಹರಿದು ಮಣ್ಣು ಸಡಿಲಗೊಂಡು ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡದ ಕೆಳಭಾಗದಲ್ಲೇ ಇದ್ದ ಮನೆಯ ಹಿಂಬದಿಯ ಗೋಡೆಯನ್ನು ಸೀಳಿ ಮನೆಯೊಳಗೆ‌ ಮಣ್ಣು, ನೀರು ನುಗ್ಗಿದೆ. ನೀರು ಬರುತ್ತಲೇ ಕುಟುಂಬದ ಸದಸ್ಯರು ಮನೆಯಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಈ ಪ್ರದೇಶದಲ್ಲಿ ಭಾರೀ ಮಳೆ ಬಂದಾಗ ಗುಡ್ಡದಿಂದ ಜಲಪಾತದ ರೀತಿ ನೀರು ಹರಿಯುತ್ತದೆ. ಇಲ್ಲಿ ಮಳೆ ನೀರು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲ. ನೀರು ಮನೆಯ ಅಂಗಳದಲ್ಲೇ ಹರಿದು ಹೋಗುತ್ತಿದೆ. ಮರಗಳು ಅಲುಗಾಡಿದಾಗ ಮಣ್ಣು ಸಡಿಲಗೊಂಡು ಗುಡ್ಡ ಕುಸಿಯುತ್ತಿದೆ. ನೀರು ಭಾರೀ ಪ್ರಮಾಣದಲ್ಲಿ ಹರಿದು ಬಂದು ಮಣ್ಣು ಕುಸಿದಿದೆ. ಬಹಳ‌ ಕಷ್ಟಪಟ್ಟು ಕನಸಿನ ಮನೆ ಕಟ್ಟಿಸಿದ್ದೇವೆ. ಈ‌ ರೀತಿ ಆದಾಗ ತುಂಬಾ ಬೇಜರಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಜತೆ ಅಳಲು ತೋಡಿಕೊಂಡಿದ್ದಾರೆ.

ಗುಡ್ಡ ಕುಸಿತದಿಂದ ಮೈಮೂನಾ ಎಂಬವರ ಮನೆಗೆ‌ ಸಂಪುರ್ಣ ಹಾನಿಯಾಗಿದೆ. ಇದೇ ವೇಳೆ, ಮನೆಯವರು ಕೆಲವರು ಮದುವೆ ಸಮಾರಂಭಕ್ಕೆ ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ದೊಡ್ಡ ಅನಾಹುತ ತಪ್ಪಿದೆ. ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಪೂರ್ತಿ ಕೆಸರುಮಯವಾಗಿದೆ. ಮನೆಯೊಳಗೆ ಗುಡ್ಡದ ಕೆಸರು ನೀರು ಹಳ್ಳದಂತೆ ಹರಿಯುತ್ತಿದೆ. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳಿಗೆ ಸಂಪೂರ್ಣ ಹಾನಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button