ಸಂತೇಮರಹಳ್ಳಿ ಮಹೇಶ್ ಬಿಜೆಪಿಗೆ ಬಂದ ಮೇಲೆ ನನ್ನ ಕಡೆಗಣನೆ: ನಂಜುಂಡಸ್ವಾಮಿ
ಚಾಮರಾಜನಗರ:ಬಿಜೆಪಿ ನಾಯಕರು ಪಕ್ಷದಲ್ಲಿ ನನ್ನನ್ನು ಸರಿಯಾಗಿ ಗೌರವಿಸಿಲ್ಲ. ಹೀಗಾಗಿ, ಅಭಿಮಾನಿಗಳ ಅಭಿಪ್ರಾಯಕ್ಕೆ ಬದ್ದನಾಗಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಿ.ಎನ್.
ನಂಜುಂಡಸ್ವಾಮಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ಸಭೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಇದುವರೆಗಿನ ರಾಜಕೀಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವತಿಯಿಂದ ಎರಡು ಬಾರಿ ಶಾಸಕನಾಗಿದ್ದೇನೆ. ಎಲ್ಲಿಯೂ ಹೆಸರು ಕೆಡಿಸಿಕೊಂಡಿಲ್ಲ. ಜತೆಗೆ ರಾಜ್ಯದ 19 ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ, ಈಚಿನ ದಿನಗಳಲ್ಲಿ ಶಾಸಕ ಎನ್.ಮಹೇಶ್ ಪಕ್ಷ ಸೇರಿದ ಮೇಲೆ ನನ್ನ ಹಾಗೂ ನಮ್ಮ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ’ ಎಂದರು.
‘ನಂಜುಂಡಸ್ವಾಮಿ ಪಕ್ಷ ಬಿಡುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ಬಂದಮೇಲೆ ಪಕ್ಷದ ನಾಯಕರು ನನ್ನನ್ನು ಸೌಜನ್ಯಕ್ಕಾದರೂ ಭೇಟಿ ಆಗಿಲ್ಲ. ಜಿಲ್ಲೆಯಲ್ಲಿ ಈಚೆಗೆ ನಡೆದ ಬಿಜೆಪಿ ಸಮಾರಂಭದಲ್ಲಿ ರಾಜ್ಯ ನಾಯಕರು ‘ಇದ್ದವರು ಇರಬಹುದು, ಹೋಗುವವರು ಹೋಗಬಹುದು’ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಕೊಳ್ಳೇಗಾಲದಲ್ಲಿ ನಡೆದ ಬಿಜೆಪಿ ಸಭೆಯ ಬಗ್ಗೆ ನನಗೆ ಮಾಹಿತಿ ನೀಡಿಲ್ಲ. ಜತೆಗೆ ಫ್ಲೆಕ್ಸ್ಗಳಲ್ಲಿ ನನ್ನದೊಂದು ಭಾವಚಿತ್ರ ಹಾಕಿಲ್ಲ. ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದ ನಾನು ಇಕ್ಕಟ್ಟಿನಲ್ಲಿದ್ದೇನೆ. ಅಭಿಮಾನಿಗಳು ಮುಂದೆ ಯಾವ ಪಕ್ಷ ಸೇರಬೇಕು ಅಥವಾ ಮೌನವಾಗಿರಬೇಕೋ ಎಂಬುದನ್ನು ತಿಳಿಸಿದರೆ, ಅದರಂತೆ ನಡೆದುಕೊಳ್ಳುತ್ತೇನೆ’ ಎಂದು ತಿಳಿಸಿದರು.
‘ನೀವು ಯಾವ ಪಕ್ಷ ಸೇರುತ್ತೀರೋ ಆ ಪಕ್ಷ ಹಾಗೂ ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಬೆಂಬಲಿಸುತ್ತೇವೆ’ ಎಂದು ಬೆಂಬಲಿಗರು ಹೇಳಿದರು. ತಿಳಿಸಿದರು.
ಎಂ.ನಿರಂಜನಮೂರ್ತಿ, ಮಾದೇಶ್ ಉಪ್ಪಾರ್, ಬಿ.ಪಿ.ನಾಗೇಂದ್ರ, ನಿಂಗರಾಜು, ರಂಗಸ್ವಾಮಿ, ಬನ್ನಿಸಾರಿಗೆ ನಾಗೇಶ್, ಗೌಡರ ಮಹದೇವಪ್ಪ, ಕಂದಳ್ಳಿ ನಾಗೇಶ್, ಗೋವಿಂದರಾಜು, ಬಸವರಾಜು, ಮಹೇಶ್, ಮದ್ದೂರು ಚಿಕ್ಕಣ್ಣ, ಶಿವಮಲ್ಲು, ಮಹದೇವಯ್ಯ, ಪುಟ್ಟಸ್ವಾಮಿ, ಕೆ.ಎಂ.ರಾಜು, ಶಂಕರ್, ಭೀಮಣ್ಣ, ಮಾದೇಗೌಡ, ಸೋಮಣ್ಣ, ವೆಂಕಟರಾಮು, ವೆಂಕಟರಂಗನಾಯ್ಕ, ಜಯಶಂಕರ್, ಬಂಗಾರು, ಚಂದ್ರಶೇಖರ್, ಕೆ.ಸಿ.ರೇವಣ್ಣ, ಕೆ.ಹೊಸೂರು ಆರಾಧ್ಯ ಇದ್ದರು.



