ಚುನಾವಣೆಗೆ ಮುನ್ನವೇ ಸಮನ್ಸ್ ಏಕೆ?: ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ

ದೆಹಲಿ ಜನವರಿ 04: ಜಾರಿ ನಿರ್ದೇಶನಾಲಯವು ತನ್ನನ್ನು ಬಂಧಿಸುವ ಸಾಧ್ಯತೆಯಿದೆ ಎಂಬ ಅವರ ಪಕ್ಷದ ಹೇಳಿಕೆಗಳ ನಡುವೆ, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡದಂತೆ ನನಗೆ ಸಮನ್ಸ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದ ಅವರು, ಬಿಜೆಪಿ ತನ್ನನ್ನು ಬಂಧಿಸಲು ಯತ್ನಿಸುತ್ತಿದೆ ಎಂಬ ತಮ್ಮ ಪಕ್ಷದ ಹೇಳಿಕೆಯನ್ನು ಪುನರುಚ್ಚರಿಸಿದರು.
ಕಳೆದ ಎರಡು ವರ್ಷಗಳಲ್ಲಿ ಮದ್ಯ ನೀತಿ ಹಗರಣದ ಬಗ್ಗೆ ನೀವು ಹಲವಾರು ಬಾರಿ ಕೇಳಿರಬಹುದು. ಈ ಎರಡು ವರ್ಷಗಳಲ್ಲಿ, ಬಿಜೆಪಿಯ ಎಲ್ಲಾ ಏಜೆನ್ಸಿಗಳು ಹಲವಾರು ದಾಳಿಗಳನ್ನು ನಡೆಸಿ ಹಲವಾರು ಜನರನ್ನು ಬಂಧಿಸಿವೆ, ಆದರೆ ಅವರಿಗೆ ಭ್ರಷ್ಟಾಚಾರದ ಮೊತ್ತವನ್ನಾಲೀ ಒಂದೇ ಒಂದು ಪೈಸೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ನಿಜವಾಗಿ ಭ್ರಷ್ಟಾಚಾರ ನಡೆದಿದ್ದರೆ, ಎಲ್ಲ ಕೋಟಿಗಳು ಎಲ್ಲಿ ಹೋದವು? ಹಣವೆಲ್ಲ ಗಾಳಿಗೆ ಮಾಯವಾಗಿ ಹೋಯಿತೇ? ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳಿದ ಕೇಜ್ರಿವಾಲ್, ಹಾಗಾಗದೇ ಇದ್ದಿದ್ದರೆ ಹಣ ಸಿಗುತ್ತಿತ್ತು ಎಂದಿದ್ದಾರೆ. ಜಾರಿ ನಿರ್ದೇಶನಾಲಯ ನೀಡಿದ ಮೂರು ಸಮನ್ಸ್ಗಳನ್ನು ಕೇಜ್ರಿವಾಲ್ ತಪ್ಪಿಸಿಕೊಂಡಿದ್ದಾರೆ. ಸಮನ್ಸ್ ವಿಷಯದಲ್ಲಿ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ ಕೇಜ್ರಿವಾಲ್, “ಅವರು ಈ ಕಾಲ್ಪನಿಕ ಪ್ರಕರಣದಲ್ಲಿ ಹಲವಾರು ಎಎಪಿ ನಾಯಕರನ್ನು ಜೈಲಿಗೆ ಹಾಕಿದ್ದಾರೆ, ಯಾರ ವಿರುದ್ಧವೂ ಯಾವುದೇ ಸಾಕ್ಷ್ಯಗಳಿಲ್ಲ ಮತ್ತು ಯಾವುದನ್ನೂ ಸಾಬೀತುಪಡಿಸಲಾಗಿಲ್ಲ. ಯಾರನ್ನಾದರೂ ಜೈಲಿಗೆ ಹಾಕುತ್ತಿದ್ದಾರೆ. ಈಗ ಬಿಜೆಪಿ ನನ್ನನ್ನು ಬಂಧಿಸಲು ಬಯಸಿದೆ. ನನ್ನ ದೊಡ್ಡ ಆಸ್ತಿ ನನ್ನ ಪ್ರಾಮಾಣಿಕತೆ. ಅವರು ಸುಳ್ಳು ಆರೋಪಗಳನ್ನು ಹೊರಿಸಿ ಆಧಾರರಹಿತ ಸಮನ್ಸ್ಗಳನ್ನು ನೀಡುವ ಮೂಲಕ ನನ್ನ ಪ್ರತಿಷ್ಠೆಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ.
ನನ್ನ ವಕೀಲರು ಸಮನ್ಸ್ ಕಾನೂನುಬಾಹಿರ ಎಂದು ನನಗೆ ಹೇಳಿದ್ದಾರೆ. ನಾನು ಜಾರಿ ನಿರ್ದೇಶನಾಲಯಕ್ಕೆ ಪತ್ರಗಳಲ್ಲಿ ವಿವರವಾಗಿ ಇದಕ್ಕೆ ಕಾರಣಗಳನ್ನು ನೀಡಿದ್ದೇನೆ. ಆದರೆ ಅವರು ಒಂದೇ ಒಂದು ಕಾರಣಕ್ಕೆ ಪ್ರತಿಕ್ರಿಯಿಸಿಲ್ಲ, ಅವರ ಬಳಿ ಯಾವುದೇ ಉತ್ತರವಿಲ್ಲ ಎಂದು ಇದು ಸೂಚಿಸುತ್ತದೆ.ಬಿಜೆಪಿಯ ಉದ್ದೇಶ ತನಿಖೆಯಲ್ಲ, ನಾನು ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಬಾರದು ಎಂದು ಖಚಿತಪಡಿಸಿಕೊಳ್ಳಲು ಅವರು ಬಯಸುತ್ತಾರೆ. ಎರಡು ವರ್ಷಗಳಿಂದ ತನಿಖೆ ನಡೆಯುತ್ತಿದ್ದರೂ ಚುನಾವಣೆಗೂ ಮುನ್ನವೇ ನನಗೆ ಸಮನ್ಸ್ ನೀಡಿದ್ದಾರೆ. ಅವರು ನನ್ನನ್ನು ಮೊದಲು ಏಕೆ ಕರೆಯಲಿಲ್ಲ ಎಂದು ಕೇಜ್ರಿವಾಲ್ ಕೇಳಿದ್ದಾರೆ.



