
ಸಾಗರ ವಿದ್ಯಾವಂತರಾಗಿ ಹೊರಗಡೆ ಉದ್ಯೋಗಸ್ಥರಾಗುವ ಹವ್ಯಕ ವರ್ಗದವರು ಒಂದೆಡೆಯಾದರೆ ಊರಿನಲ್ಲಿದ್ದು, ಮನೆ, ತೋಟ ನೋಡಿಕೊಂಡಿರುವ ಯುವಕರು ಸ್ವಯಮ್ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ವಿಫುಲ ಅವಕಾಶಗಳಿವೆ ಎಂದು ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ ಅಭಿಪ್ರಾಯಪಟ್ಟರು.
ಅವರು ಸಾಗರ ನಗರದ ಬ್ರಾಸಂ ಸಭಾಂಗಣದಲ್ಲಿ ಅಖಿಲ ಹವ್ಯಕ ಮಹಾಸಭಾ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸ್ವಯಮ್ ವಾಣಿಜ್ಯೋತ್ಸವ ಸಾಗರ ಪ್ರಾಂತ್ಯ ವ್ಯಾಪ್ತಿಯ ಹವ್ಯಕ ಸ್ವಉದ್ಯಮಿಗಳ ಸಮಾವೇಶದ ಸಮಾರೋಪದಲ್ಲಿ ಹಿರಿಯ ಸ್ವ-ಉದ್ಯಮಿಗಳನ್ನು ಸನ್ಮಾನಿಸಿ ಮಾತನಾಡಿದರು.
ಹವ್ಯಕರು ಎಂದರೆ ಪ್ರಜ್ಞಾವಂತರು, ತಿಳುವಳಿಕೆ ಹೊಂದಿದವರು ಎಂಬ ಭಾವವಿದೆ. ಹವ್ಯಕರನ್ನು ಹೆಗ್ಡೆ ಅಥವಾ ಮಹಾಬ್ರಾಹ್ಮಣರೂ ಎಂದೂ ಕರೆಯುತ್ತಾರೆ. ಇಂತವರು ಉದ್ಯಮ ಆರಂಭಿಸಿದರೆ ಯಶಸ್ಸು ಪಡೆಯಬಹುದು ಎಂಬುದಕ್ಕೆ ಇಲ್ಲಿನ ಎಲ್ಲ ಸನ್ಮಾನಿತರು, ಹಾಗೂ ನಾವೆಲ್ಲ ಉದಾಹರಣೆಯಾಗಿದ್ದೇವೆ. ನೂರಾರು ಕೋಟಿ ವ್ಯವಹಾರ ನಡೆಸುತ್ತಿರುವ ಮೂರು ಜಿಲ್ಲೆ ವ್ಯಾಪ್ತಿಯ ಶಿಮುಲ್‌ನ ಆಡಳಿತ ಮಂಡಳಿಯ 16 ನಿರ್ದೇಶಕರಲ್ಲಿ ಬ್ರಾಹ್ಮಣ ಸಮುದಾಯವನ್ನು ಪ್ರತಿನಿಧಿಸುತ್ತಿರುವವನು ನಾನೊಬ್ಬನೆ. ಈಗ ಅವಿರೋಧವಾಗಿ ನಿರ್ದೇಶಕನಾಗಿ, 2ನೇ ಬಾರಿ ಅಧ್ಯಕ್ಷನಾಗಿರುವುದನ್ನು ನೋಡಿದರೆ ಹವ್ಯಕರಿಗೆ ಛಲ,ಸಮುದಾಯ ಬೆಂಬಲಿಸಿದರೆ ಯಾವುದೂ ಅಸಾಧ್ಯವಲ್ಲ ಎಂದು ಸಾಬೀತಾಗುತ್ತದೆ. ಸ್ವಯಂ ಉದ್ಯೋಗ ನಡೆಸುವವರಿಗೆ ಶಿಮುಲ್ ಪ್ರೋತ್ಸಾಹಿಸುತ್ತಿದ್ದು, ಆಸಕ್ತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ ಮಾತನಾಡಿ, ದೇಶದ ಒಟ್ಟ ಜಿಡಿಪಿಯಲ್ಲಿ ಶೇ. ೪೦ರ ಕೊಡುಗೆ ಸಣ್ಣ ಕೈಗಾರಿಕೆಗಳು ನೀಡುತ್ತಿದ್ದು, ಕೇಂದ್ರ ಸರಕಾರವೂ ಈ ಕ್ಷೇತ್ರ ಉತ್ತೇಜಿಸಲು ದೊಡ್ಡ ಮೊತ್ತದ ಬಜೆಟ್ ನೀಡಿದೆ. ಇದನ್ನು ಬಳಸಿಕೊಳ್ಳಲು ಹವ್ಯಕ ಸಮುದಾಯದ ಯುವಕರು ಮುಂದೆ ಬರಬೇಕು ಎಂದರು.
ಹವ್ಯಕ ಮಹಾಸಭೆ ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ್ ಸಂಪ ಅಧ್ಯಕ್ಷತೆ ವಹಿಸಿದ್ದರು. ಉಮೇಶ್ ಬಂದಗದ್ದೆ ವೇದಿಕೆಯಲ್ಲಿದ್ದರು. ಸನ್ಮಾನಿತರ ಪರವಾಗಿ ಎಸ್.ಟಿ.ರತ್ನಾಕರ್, ಗಣಪತಿ ಸುಳಗೋಡು ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕೆ.ಭೀಮರಾವ್, ಸಿ.ಎಲ್.ವೆಂಕಟಗಿರಿ, ಲಕ್ಷ್ಮಿನಾರಾಯಣ ಭಟ್ಟರು ಹುಳೇಗಾರು, ಶ್ರೀಧರ ಹೆಗಡೆ, ಶ್ರೀಕಾಂತ ಹಂಸ, ಅಶ್ವತ್ಥ ನಾರಾಯಣ, ಮಂಜಭಟ್ಟರು ಗೋಳಗೋಡು, ಸುಬ್ಬಮ್ಮ ಸಂಪೆಕಟ್ಟೆ, ಜಾನವಿ ಮೂಡುಗೋಡು, ಎಚ್.ಕೆ.ಕೃಷ್ಣಮೂರ್ತಿ ತಲವಾಟ, ಬಿ.ಎನ್.ಸದಾಶಿವರಾವ್, ಮಂಜುನಾಥ ಹಿಂಸೋಡಿ ಅವರನ್ನು ಸನ್ಮಾನಿಸಲಾಯಿತು. ಪುಷ್ಪಾ ಸಂಗಡಿಗರು ಪ್ರಾರ್ಥಿಸಿದರು. ಸಮಾವೇಶದ ಸಂಚಾಲಕ ಎಚ್.ಎನ್. ಉಮೇಶ್ ದೊಂಬೆ ಸ್ವಾಗತಿಸಿದರು. ಹು.ಭಾ. ಅಶೋಕ ವಂದಿಸಿದರು. ಡಾ. ಮಮತಾ ಹೆಗಡೆ ನಿರೂಪಿಸಿದರು.
.



