
ನವದೆಹಲಿ: ಮುಂಬೈ ತಾಜ್ ಹೋಟೆಲ್ ದಾಳಿಯ ಮಾಸ್ಟರ್ಮೈಂಡ್ ತಹಾವ್ವುರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 18 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ. ಹೋಟೆಲ್ ಮೇಲಿನ ಮಾರಕ ದಾಳಿ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಯಲು ಮಾಡಲು ಆರೋಪಿಯನ್ನು ವಿವರವಾಗಿ ಪ್ರಶ್ನಿಸಲಾಗುವುದು ಎನ್ಐಎ ಎಂದು ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.ಗುರುವಾರ ಸಂಜೆ ಸಂಚುಕೋರ ರಾಣಾನನ್ನು ಅಮೆರಿಕದ ಲಾಸ್ ಏಂಜಲೀಸ್‌ನಿಂದ ವಿಶೇಷ ವಿಮಾನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎನ್ಎಸ್ಜಿ ಮತ್ತು ಎನ್ಐಎ ತಂಡಗಳ ಬೆಂಗಾವಲಿನೊಂದಿಗೆ ನವದೆಹಲಿಗೆ ಕರೆತರಲಾಯಿತು. ಅಮೆರಿಕದಿಂದ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGI) ರಾಣಾ ಆಗಮಿಸಿದಾಗ, ಔಪಚಾರಿಕವಾಗಿ ಆತನನ್ನು ಬಂಧಿಸಲಾಯಿತು. ಬಳಿಕ ದೆಹಲಿ ಪೊಲೀಸರ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳು (ಎಸ್‌ಡಬ್ಲ್ಯೂಎಟಿ) ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಭಾರೀ ಭದ್ರತೆಯೊಂದಿಗೆ ಅಧಿಕಾರಿಗಳು ರಾಣಾನನ್ನು ಪಟಿಯಾಲ ಹೌಸ್ನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಲಯವು ರಾಣಾನನ್ನು 18 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿ ಆದೇಶಿಸಿದ್ದು, ಈ ಅವಧಿಯಲ್ಲಿ ತಾಜ್ ಹೋಟೆಲ್ ದಾಳಿಯ ಹಿಂದಿನ ಸಂಪೂರ್ಣ ಪಿತೂರಿ ಬಯಲು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ನವದೆಹಲಿಯ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಎನ್ಐಎ ಅಧಿಕಾರಿಗಳು ರಾಣಾನನ್ನು ಅಮೆರಿಕದಿಂದ ಕರೆತಂದು ತಮ್ಮ ವಶಕ್ಕೆ ಪಡೆದಿದ್ದರು.
ಭಾರತದ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯದ ಸಂಘಟಿತ ಪ್ರಯತ್ನಗಳ ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಸಂಬಂಧಿತ ಅಧಿಕಾರಿಗಳೂ ಸೇರಿ, ಭಯೋತ್ಪಾದಕನ ವಿರುದ್ಧ ಅಗತ್ಯ ಶರಣಾಗತಿ ವಾರಂಟ್ ಅನ್ನು ಅಂತಿಮವಾಗಿ ಪಡೆದುಕೊಂಡ ಬಳಿಕ ಹಸ್ತಾಂತರ ಪ್ರಕಿಯೆ ನಡೆದಿದೆ ಎಂದು ಎನ್ಐಎ ಹೇಳಿಕೆಯಲ್ಲಿ ವಿವರಿಸಿದೆ.
2008ರ ನವೆಂಬರ್ 26ರಂದು ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಒಟ್ಟು 166 ಜನರು ಸಾವನ್ನಪ್ಪಿದ್ದರು. ಅಲ್ಲದೆ, 238ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.


