
ಹೇಳುವವರು ಕೇಳುವವರು ಇಲ್ಲದ ಕಾರಣ ಹನೂರು ಪಟ್ಟಣದ ಆಯಕಟ್ಟಿನ ಜಾಗಗಳಲ್ಲಿ ಎಲ್ಲೆಂದರಲ್ಲಿ ಪ್ಲಕ್ಸ್ ಬ್ಯಾನರ್ ಜಾಹೀರಾತು ಬೋಡ್೯ಗಳ ಭರಾಟೆ ಜೋರಾಗಿದ್ದು ಸರ್ಕಾರಿ ಕಟ್ಟಡಗಳು ವಿರೂಪಗೊಳ್ಳುತ್ತಿರುವುದರ ಜತೆಗೆ ಪಟ್ಟಣ ಪಂಚಾಯ್ತಿ ಆದಾಯಕ್ಕೂ ಖೋತಾ ಆಗಿದೆ.
ಹನೂರು ತಾಲೂಕಿನ ಕೇಂದ್ರಸ್ಥಾನದ ಪಟ್ಟಣ ಪಂಚಾಯಿತಿ ಕಟ್ಟಡ, ಖಾಸಗಿ ಬಸ್ ನಿಲ್ದಾಣ ಕಟ್ಟಡ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಹನೂರು, ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆ ಬದಿ ಹೀಗೆ ಎಲ್ಲೆಂದರಲ್ಲಿ ರಾಜಕೀಯ ಧುರೀಣರು, ವಿವಿಧ ಸಂಘಟನೆಗಳ ಮುಖಂಡರ ಭಾವ ಚಿತ್ರವುಳ್ಳ ಪ್ಲೆಕ್ಸ್ ಬ್ಯಾನರ್ ಗಳು ನೇತು ಹಾಕಲ್ಪಟ್ಟು ವರ್ಷಾನುಗಟ್ಟಲೆ ಕಳೆದರೂ ಪ.ಪಂಚಾಯ್ತಿ ಅಧಿಕಾರಿಗಳ ಬೇಕಾಬಿಟ್ಟಿ ಆಡಳಿತ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯತನದಿಂದ ಇದನ್ನು ಪ್ರಶ್ನೆ ಮಾಡುತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಎಲ್ಲರೂ ನಿಯಮದಂತೆ ಅನುಮತಿ ಅಥವಾ ಶುಲ್ಕ ಪಾವತಿ ಪ್ರಕ್ರಿಯೆಯೂ ಇಲ್ಲದ ಕಾರಣ ಪುಕ್ಸಟ್ಟೆ ಗಂಡ ಹೊಟ್ಟೆ ತುಂಬ ಉಂಡ ಎಂಬಂತೆ ಎಲ್ಲೆಂದರಲ್ಲಿ ಪ್ಲಕ್ಸ್ ಬ್ಯಾನರ್ ಅಳವಡಿಕೆಗೆ ನಾ ಮುಂದು ತಾ ಮುಂದು ಎಂದು ಇಡೀ ಸರ್ಕಾರಿ ಕಟ್ಟಡಗಳನ್ನೇ ಪ್ಲಕ್ಸ್ ಮಯ ಮಾಡಿ ಬಿಟ್ಟಿದ್ದಾರೆ.
ಹಬ್ಬ ಹರಿದಿನ ಜನನ- ಮರಣ, ರಾಜಕೀಯ ದುರೀಣರ ಆಗಮನ, ಸಭೆ, ಸಮಾರಂಭ, ಕಾರ್ಯಕ್ರಮ, ಶುಭ ಹಾರೈಕೆ, ಜಯಂತಿ ಮಹೋತ್ಸವ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳ ಪ್ರಯುಕ್ತ ಪಟ್ಟಣ ಪಂಚಾಯ್ತಿ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಯಾವಾಗ ಎಂದರೆ ಆವಾಗ ಪ್ಲೆಕ್ಸ್ ಬ್ಯಾನರ್ ಗಳನ್ನು ನೇತು ಹಾಕಿ ಪಂಚಾಯ್ತಿಗೆ ಸಲ್ಲಬೇಕಾದ ಶುಲ್ಕಕ್ಕೆ ಪಂಗ ನಾಮ ಹಾಕುತ್ತಿದ್ದಾರೆ. ಇದು ಅಧಿಕಾರಿಗಳ ಕಣ್ಣಿಗೆ ರಾಚುವಂತಿದ್ದರೂ ನಮಗೇಕೆ ಎನ್ನುವ ರೀತಿ ವರ್ತಿಸುತ್ತಿರುವುದು ಪ್ರಬುದ್ದ ನಾಗರೀಕರಲ್ಲಿ ಅಸಹನೆ ಮೂಡಿ ಪಂಚಾಯ್ತಿಯ ಕಾರ್ಯವೈಖರಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರ ಹಾಗೂ ವಿರೋಧ ಪಕ್ಷಗಳ ರಾಜಕೀಯ ದುರೀಣರ ಭಾವ ಚಿತ್ರಗಳು ಪ್ಲಕ್ಸ್ ಗಳಲ್ಲಿ ರಾರಾಜಿಸುತ್ತಿರುವುದರಿಂದ ಅದನ್ನು ಪ್ರಶ್ನಿಸಿದಲ್ಲಿ ಹಿಂದೆ ಹೋದರೆ ಟಗರು ಮುಂದೆ ಹೋದರೆ ಬಾವಿ ಎಂಬಂತೆ ಎಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕ ( ಕಾಂಗ್ರೆಸ್ ಸರ್ಕಾರದ ಶಾಸಕ)ರ ಕೆಂಗಣ್ಣಿಗೆ ಗುರಿಯಾಗಬೇಕಾದೀತೋ ಎಂಬ ಭಯದಿಂದ ಯಾವುದೇ ಚಕಾರ ಎತ್ತದೆ ಮಗುಮ್ಮಾಗಿ ಉಳಿದಿದ್ದಾರೆ.
ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಪ್ಲೆಕ್ಸ್ ಬ್ಯಾನರ್ ಗಳನ್ನು ಹಾಕುವುದು ನಿಯಮ ಬಾಹಿರ ಎಂದು ಕೆಲ ಜನಪ್ರತಿನಿಧಿಗಳಿಗೆ ಅರಿವಿದ್ದು ಅಧಿಕಾರದಲ್ಲಿ ಇಲ್ಲದಿದ್ದರೂ ಈ ರೂಪದಲ್ಲಾದರೂ ಪುಕ್ಕಟೆ ಪ್ರಚಾರ ಪಡೆಯುವುದರ ಜತೆ ತಮ್ಮ ಅಸ್ಥಿತ್ವ ಉಳಿಸಲು ಮುಂದಾಗಿರುವ ಬೆಂಬಲಿಗರ ಉತ್ಸಾಹಕ್ಕೆ ಭಂಗತರಲು ಮುಂದಾಗದ ಕಾರಣ ಈ ಪ್ರವೃತ್ತಿ ಯಥಾವತ್ತಾಗಿ ಮುಂದುವರೆದಿದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ ಅಲ್ಲವೆ..?.
ರಾತ್ರೋರಾತ್ರಿ ನಸುಕಿನಲ್ಲಿ ಹಗಲು ರಾತ್ರಿಯೆನ್ನದೆ ಹೀಗೆ ಬೇಕೆಂದಾಗ ಬೇಕಾದ ಕಡೆ ಬೇಕಾಬಿಟ್ಟಿಯಾಗಿ ಎಲ್ಲೆಂದರಲ್ಲಿ ಪಟ್ಟಣದ ಸರ್ಕಾರಿ ಕಟ್ಟಡಗಳಲ್ಲಿ ರಾಜಾರೋಷವಾಗಿ ಪ್ಲೆಕ್ಸ್ ಅಳವಡಿಕೆ ನಿರಾತಂಕವಾಗಿ ಸಾಗಿದೆ. ಪ್ಲಾಸ್ಟಿಕ್ ಬಳಕೆ ಬೇಡ ಎನ್ನುವ ಗೋಡೆ ಬರಹದ ಬಳಿಯೇ ಹೆಚ್ಚೆಚ್ಚು ಪ್ಲಾಸ್ಟಿಕ್ ನ ಪ್ಲೆಕ್ಸ್ ಬ್ಯಾನರ್ಗಳು ರಾರಾಜಿಸುತ್ತಿರುವುದು ಪ್ಲಾಸ್ಟಿಕ್ ಬಳಕೆ ಬಗೆಗಿನ ಜಾಗೃತಿ ಕೇವಲ ಬರಹಕ್ಕಷ್ಟೆ ಸೀಮಿತವಾಗಿದ್ದು ವಾಸ್ತವದಲ್ಲಿ ಪ್ಲಾಸ್ಟಿಕ್ ನದೇ ಸಾಮ್ರಾಜ್ಯ ಎಂಬಂತಾಗಿದೆ.
ಇತ್ತಿಚೆಗೆ ಪಂಚಾಯ್ತಿಯಲ್ಲಿ ನಡೆದ ಆಯ-ವ್ಯಯ ಸಭೆಯಲ್ಲಿ ಅಧ್ಯಕ್ಷರು, ಸದಸ್ಯರ ಸಮ್ಮುಖದಲ್ಲೇ ಪ್ಲೆಕ್ಸ್ ಬ್ಯಾನರ್ ಹಾವಳಿ ಕುರಿತು ಪ್ರಸ್ತಾಪಿಸಿದ ಶಾಸಕ ಎಂ.ಆರ್. ಮಂಜುನಾಥ್ ಅವರು ಅಕ್ರಮ ಪ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ಕಡಿವಾಣ ಹಾಕಬೇಕು. ನಿಗಧಿತ ಶುಲ್ಕ, ಅವಧಿ, ಅನುಮತಿ ಬಗ್ಗೆ ಅಗತ್ಯ ಕ್ರಮಕೈಗೊಂಡು ಆದಾಯ ಹೆಚ್ಚಿಸಿ ಸ್ವಚ್ಛತೆ ಕಾಪಾಡಬೇಕು ಜೊತೆ ಪಟ್ಟಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸೂಚನೆ ನೀಡಿದ್ದರು. ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದಿದ್ದರೂ ಇಂದಿಗೂ ಪ್ಲೆಕ್ಸ್ ಗಳ ತೆರವು ಕಾರ್ಯಕ್ಕೆ ಸಂಬಂಧಪಟ್ಟವರು ಇನ್ನೂ ಮುಂದಾಗಿಲ್ಲ.
ಈಗಲಾದರೂ ಪ.ಪಂಚಾಯ್ತಿ ಅಧಿಕಾರಿಗಳು ಪಟ್ಟಣದ ಅಂದಗೆಡಿಸುತ್ತಿರುವ ಪಂಚಾಯತಿ ಅದಾಯಕ್ಕೆ ಕುತ್ತು ತಂದಿರುವ ಅಕ್ರಮ ಪ್ಲೆಕ್ಸ್ ಬ್ಯಾನರ್ ಗಳ ತೆರವಿಗೆ ಮುಂದಾಗಿ ಪ್ಲಾಸ್ಟಿಕ್ ತಡೆಗೆ ಮುಂದಾಗುವರೇ ಇಲ್ಲ ರಾಜಕಾರಣಿಗಳ ಮರ್ಜಿಗೆ ಹೆದರಿ ಮಗುಮ್ಮಾಗುಳಿಯುವರೇ ಕಾದು ನೋಡಬೇಕಿದೆ.



