ಕ್ರೀಡೆ
Trending

CSK ಮುಂದೆ RCB ಜುಜುಬಿ ತಂಡ: ಅಂಬಾಟಿ ರಾಯುಡು

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 52ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಿಎಸ್​ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ನೀಡಿದ ಹೇಳಿಕೆಯು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.ಚಾನೆಲ್​ ಚರ್ಚೆಯೊಂದರಲ್ಲಿ ಮಾತನಾಡಿದ ಅಂಬಾಟಿ ರಾಯುಡು, ಆರ್​ಸಿಬಿ ಮತ್ತು ಸಿಎಸ್​ಕೆ ನಡುವೆ ಯಾವುದೇ ಪೈಪೋಟಿಯಿಲ್ಲ. ಉಭಯ ತಂಡಗಳಿಂದ ಜಿದ್ದಾಜಿದ್ದಿನ ಕದನ ನಿರೀಕ್ಷೆಯನ್ನು ಸಹ ಮಾಡುವಂತಿಲ್ಲ. ಇಲ್ಲಿ ಆರ್​ಸಿಬಿ ತಂಡವನ್ನು ಸಿಎಸ್​ಕೆ ತಂಡದ ಸಾಂಪ್ರದಾಯಿಕ ಎದುರಾಳಿಯಾಗಿ ಬಿಂಬಿಸಲಾಗಿದೆ. ಆದರೆ ಅಂತಹದ್ದೇನು ಇಲ್ಲ. ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿಯೇ ಇಲ್ಲ.ಏಕೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಲವು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬಗ್ಗು ಬಡಿದಿದೆ. ಅಲ್ಲದೆ ಆರ್​ಸಿಬಿ ವಿರುದ್ಧ ಸಿಎಸ್​ಕೆ ಮೇಲುಗೈ ಸಾಧಿಸುತ್ತಾ ಬಂದಿದೆ. ಹೀಗಾಗಿ ಆರ್​ಸಿಬಿ, ಸಿಎಸ್​ಕೆ ತಂಡದ ಸಾಂಪ್ರದಾಯಿಕ ಎದುರಾಳಿ ಎಂದು ನಾನಂತು ಭಾವಿಸುವುದಿಲ್ಲ.

ನೀವು ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದರಲ್ಲಿ ಅರ್ಥವಿದೆ. ಏಕೆಂದರೆ ಉಭಯ ತಂಡಗಳ ನಡುವೆ ಅಂತಹದೊಂದು ಪೈಪೋಟಿ ಇದೆ. ಆದರೆ ಸಿಎಸ್​ಕೆ ಮುಂದೆ ಆರ್​ಸಿಬಿ ಸಾಮಾನ್ಯ ತಂಡ. ಹೀಗಾಗಿ ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿಗಳೆಂದು ಬಿಂಬಿಸುವುದು ಸರಿಯಲ್ಲ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.ಅಂದಹಾಗೆ ಅಂಬಾಟಿ ರಾಯುಡು ಆರ್​ಸಿಬಿ ತಂಡವನ್ನು ಹೀಯಾಳಿಸಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಬಾರಿ ಆರ್​ಸಿಬಿ ಹಾಗೂ ಅಭಿಮಾನಿಗಳನ್ನು ಗುರಿಯಾಗಿಸಿ ಹೇಳಿಕೆಗಳನ್ನು ನೀಡಿದ್ದರು.

ಅಂಬಾಟಿ ರಾಯುಡು ಇದಕ್ಕೂ ಮುನ್ನ ಆರ್​ಸಿಬಿ ತಂಡ ಕಪ್ ಗೆಲ್ಲಬಾರದು ಎಂದಿದ್ದರು. ಎಸ್ ಬ್ರದಿನಾಥ್ ನಡೆಸಿದ ಚಿಟ್​ ಚಾಟ್​ನಲ್ಲಿ ಕಾಣಿಸಿಕೊಂಡಿದ್ದ ರಾಯುಡುಗೆ ಈ ಬಾರಿಯಾದರೂ ಆರ್​ಸಿಬಿ ತಂಡದ ಕಾಯುವಿಕೆ ಕೊನೆಗೊಳ್ಳಲಿದೆಯಾ ಎಂದು ಪ್ರಶ್ನಿಸಲಾಗಿತ್ತು.ಇದಕ್ಕೆ ನಗುತ್ತಾ ಉತ್ತರಿಸಿದ ರಾಯುಡು, ಈ ಸಲ ನನಗೆ ಆರ್​ಸಿಬಿ ತಂಡ ಕಪ್ ಗೆಲ್ಲೋದು ಇಷ್ಟವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಅಲ್ಲದೆ ರಾಯಲ್ ಚಾಲೆಂಜರ್ಸ್​ ಬೆಂಗಳೂರುನಂತಹ ತಂಡ ಇರಬೇಕು. ಏಕೆಂದರೆ ನಿರೀಕ್ಷೆಗಳನ್ನು ಹೆಚ್ಚಿಸಿ ಅದನ್ನು ಪೂರೈಸಲು ವಿಫಲವಾಗುವ ತಂಡ ಇದ್ದರೇನೇ ಮನರಂಜನೆ ಸಿಗೋದು. ಹೀಗಾಗಿ ಆರ್​ಸಿಬಿಯಂತಹ ತಂಡ ಐಪಿಎಲ್​ನಲ್ಲಿ ಇರಬೇಕೆಂದು ನಾನು ಬಯಸುತ್ತೇನೆ.ಅಲ್ಲದೆ ಆರ್‌ಸಿಬಿ ತಂಡವು ಗೆಲ್ಲಲು ಹೆಣಗಾಡುವುದನ್ನು ನೋಡಿ ನಾನು ಸದಾ ಆನಂದಿಸುತ್ತೇನೆ. ಇದಾಗ್ಯೂ ಅವರು ಟ್ರೋಫಿ ಗೆಲ್ಲಲಿ ಎಂದು ಬಯಸುತ್ತೇನೆ. ಆದರೆ ಈ ಬಾರಿ ಅವರು ಕಪ್ ಗೆಲ್ಲಬಾರದು. ಮುಂದೊಂದು ದಿನ ಯಾವತ್ತಾದರು ಗೆಲ್ಲಲಿ. ಈ ಸಲ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂಬಾಟಿ ರಾಯುಡು ಹೇಳಿದ್ದರು.ಇದಕ್ಕೂ ಮುನ್ನ ಪೋಡ್​ ಕಾಸ್ಟ್​ವೊಂದರಲ್ಲಿ ಮಾತನಾಡಿದ್ದ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಂದು ದಿನ ಕಪ್ ಗೆಲ್ಲಬಹುದು ಎಂದು ನಾನು ಭಾವಿಸುತ್ತೇನೆ. ಆದರೆ ಈ ವರ್ಷ ಅವರು ಕಪ್ ಗೆಲ್ಲದಿರಲಿ ಎಂದು ನಾನು ಆಶಿಸುತ್ತೇನೆ ಹಾಗೂ ಪ್ರಾರ್ಥಿಸುತ್ತೇನೆ ಎಂದಿದ್ದರು.

ಆದರೆ ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ಈಗಾಗಲೇ 10 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಆರ್​ಸಿಬಿ ಪ್ಲೇಆಫ್ ಹಂತಕ್ಕೇರುವ ಸನಿಹದಲ್ಲಿದೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬಗ್ಗು ಬಡಿದು ಆರ್​ಸಿಬಿ ಪ್ಲೇಆಫ್​ಗೇರಲಿದೆಯಾ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button