
ಸಂಸತ್ತಿನ ಮಳೆಗಾಲದ ಅಧಿವೇಶನ ಇಂದು (ಜುಲೈ 21) ಆರಂಭವಾಗಲಿದ್ದು, ಸುಮಾರು ಒಂದು ತಿಂಗಳುಗಳ ಕಾಲ ನಡೆಯಲಿದೆ. ಇಡೀ ಜಗತ್ತನೇ ತಲ್ಲಣಗೊಳಿಸಿದ ಏರ್ ಇಂಡಿಯಾ ವಿಮಾನ ಪತನ, ಪಹಲ್ಗಾಮ್ ಭಯೋತ್ಪಾದಕ ದಾಳಿ ಹಾಗೂ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆ ಬಳಿಕ ಉಭಯ ಸದನಗಳು ಸಭೆ ಸೇರುತ್ತಿರುವುದು ಇದೇ ಮೊದಲು. ಹಾಗಾಗಿ ಹಲವು ವಿಷಯಗಳು ಸಂಸತ್ತಿನಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಈ ಮಳೆಗಾಲದ ಅಧಿವೇಶನ ಮಹತ್ವ ಪಡೆದಿದೆ. ಸಂಸತ್ತಿನಲ್ಲಿ ಆಡಳಿತಾರೂಢ ಪಕ್ಷವನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ.ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ಪ್ರಾರಂಭವಾಲಿದ್ದು, ಅದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನವು ಜುಲೈ 21ರಿಂದ ಆಗಸ್ಟ್ 21ರವರೆಗೆ ನಡೆಯಲಿದ್ದು, 32 ದಿನಗಳಲ್ಲಿ 21 ಅಧಿವೇಶನಗಳನ್ನು ಒಳಗೊಂಡಿದೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸಂಸತ್ತಿನ ಎರಡೂ ಸದನಗಳನ್ನು ಆಗಸ್ಟ್ 12ರಿಂದ ಆಗಸ್ಟ್ 17ರವರೆಗೆ ಮುಂದೂಡುವ ಸಾಧ್ಯತೆ ಇದ್ದು, ಆಗಸ್ಟ್ 18 ರಂದು ಮತ್ತೆ ಅಧಿವೇಶನ ಆರಂಭಗೊಳ್ಳಲಿದೆ.
ಪ್ರತಿಪಕ್ಷಗಳ ಬೇಡಿಕೆಗಳು: ಪಹಲ್ಗಾಮ್ ಭಯೋತ್ಪಾದಕ ದಾಳಿ, ಆಪರೇಷನ್ ಸಿಂಧೂರ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೂಲಕ ಪಾಕ್-ಭಾರತದ ನಡುವಿನ ಕದನ ವಿರಾಮ ಘೋಷಣೆ, ಏರ್ ಇಂಡಿಯಾ ವಿಮಾನ ಪತನ, ಭಾರತದ ವಿದೇಶಾಂಗ ನೀತಿ ಮತ್ತು ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ, ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವುದು, ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದೌರ್ಜನ್ಯಗಳು, ದೇಶದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಎಂಟು ಪ್ರಮುಖ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಲು ಇಂಡಿಯಾ ಕೂಟದ ಪ್ರತಿಪಕ್ಷಗಳ ಬೇಡಿಕೆಗಳು ನಿರ್ಧರಿಸಿದೆ. ವಿಶೇಷವಾಗಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಹಾಗೂ ಭಾರತ ಮತ್ತು ಪಾಕ್ ನಡುವೆ ಶಾಂತಿಗೆ ಮಧ್ಯಸ್ಥಿಕೆ ವಹಿಸಿರುವುದಾಗಿ ಟ್ರಂಪ್ ನೀಡುತ್ತಿರುವ ಹೇಳಿಕೆಗಾಗಿ ಪ್ರಧಾನಿ ಮೋದಿ ಅವರ ಉತ್ತರಕ್ಕಾಗಿ ಅಧಿವೇಶನದಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆ ಕೂಡ ಇದೆ.ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸರ್ವಪಕ್ಷ ಸಭೆಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, “ನಿಯಮಗಳ ಪ್ರಕಾರ ಆಪರೇಷನ್ ಸಿಂಧೂರ್ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಮುಕ್ತವಾಗಿದೆ” ಎಂದು ಹೇಳಿದರು”ಆಪರೇಷನ್ ಸಿಂಧೂರ್ ನಂತಹ ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ನಾವು ತುಂಬಾ ಮುಕ್ತರಾಗಿದ್ದೇವೆ. ಇವು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳಾಗಿವೆ. ಸರ್ಕಾರ ಈ ಬಗ್ಗೆ ಪ್ರತಿಪಕ್ಷಗಳಿಗೆ ಉತ್ತರಿಸಲು ಹಿಂದೆ ಸರಿಯುವುದಿಲ್ಲ. ಆದರೆ, ಸರ್ಕಾರವು ನಿಯಮ ಮತ್ತು ಸಂಪ್ರದಾಯಗಳಿಗೆ ಪ್ರಾಮುಖ್ಯತೆ ನೀಡುತ್ತದೆ. ಸಭೆಯಲ್ಲಿ ಪ್ರಸ್ತಾಪಿಸಲಾದ ವಿಷಯಗಳನ್ನು ಉಭಯ ಸದನಗಳ ವ್ಯವಹಾರ ಸಲಹಾ ಸಮಿತಿಯಲ್ಲಿ ಚರ್ಚಿಸಿ, ಅಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಿರಣ್ ರಿಜಿಜು ಹೇಳಿದ್ದಾರೆ.”ನಾವು ಎಲ್ಲ ಅಂಶಗಳನ್ನು ಗಮನಿಸಿದ್ದೇವೆ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುವಂತೆ ಎಲ್ಲಾ ಪಕ್ಷಗಳನ್ನು (ಖಚಿತಪಡಿಸಿಕೊಳ್ಳಲು) ನಾವು ವಿನಂತಿಸಿದ್ದೇವೆ. ಸಮನ್ವಯವನ್ನು ಖಚಿತಪಡಿಸಿಕೊಳ್ಳಬೇಕು. ಸಂಸತ್ತು ಕಾರ್ಯನಿರ್ವಹಿಸಲು ಸಹಾಯ ಮಾಡುವುದು ಎಲ್ಲರ ಜವಾಬ್ದಾರಿಯಾಗಿದೆ” ಎಂದು ಅವರು ಇದೇ ವೇಳೆ ಹೇಳಿದ್ದಾರೆ.ಪಹಲ್ಗಾಮ್ ದಾಳಿ ಮತ್ತು ಇತರ ವಿಷಯಗಳ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಗೆ ಪ್ರತಿಕ್ರಿಯಿಸಿದ ರಿಜಿಜು, “ವಿದೇಶಿ ಭೇಟಿ ಹೊರತುಪಡಿಸಿ ಪ್ರಧಾನಿ ಪ್ರಧಾನಿ ಮೋದಿ ಸಂಸತ್ತಿನಲ್ಲಿಯೇ ಇರುತ್ತಾರೆ. ಆದರೆ, ಎಲ್ಲ ಸಮಯದಲ್ಲೂ ಸದನದಲ್ಲಿ ಇರುವುದಿಲ್ಲ. ಪ್ರಮುಖ ವಿಷಯಗಳ ಕುರಿತು ರ್ಚಚಿಸಲು ಸರ್ಕಾರ ಸಿದ್ಧ ಎಂದು” ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸ್ಪಂದಿಸುವ ಸಾಧ್ಯತೆ ಕ್ಷೀಣ: ಪಹಲ್ಗಾಮ್ ಭಯೋತ್ಪಾದಕ ದಾಳಿ, ಅಮೆರಿಕ ಅಧ್ಯಕ್ಷರ ‘ಕದನ ವಿರಾಮ’ ಹೇಳಿಕೆಗಳು ಮತ್ತು ಬಿಹಾರದಲ್ಲಿ ಎಸ್‌ಐಆರ್ ಕುರಿತು ಪ್ರಧಾನಿ ಮೋದಿ ಹೇಳಿಕೆಗಳನ್ನು ನೀಡಬೇಕೆಂದು ಇಂಡಿಯಾ ಒಕ್ಕೂಟ ಒತ್ತಾಯಿಸಿದ್ದರೂ, ಈ ವಿಷಯಗಳ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಪ್ರತಿಕ್ರಿಯಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಬದಲಿಗೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂಧೂರ್ ಕುರಿತು ವಿವರವಾದ ಹೇಳಿಕೆಯನ್ನು ನೀಡುವ ಸಾಧ್ಯತೆಯಿದೆ. ಜೊತೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಬರಬಹುದು.
ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಬಹುದಾದ ಮಸೂದೆಗಳ ಪಟ್ಟಿ: ಸರ್ಕಾರವು ಅಧಿವೇಶನದಲ್ಲಿ ಹಲವಾರು ಪ್ರಮುಖ ಮಸೂದೆಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಇವುಗಳಲ್ಲಿ ಜಿಎಸ್‌ಟಿ ಸುಧಾರಣೆಗಳು, ತೆರಿಗೆ ಕಾನೂನುಗಳು, ಸಾರ್ವಜನಿಕ ಟ್ರಸ್ಟ್ ನಿಯಂತ್ರಣ, ಕ್ರೀಡಾ ಆಡಳಿತ, ಬಂದರುಗಳು ಮತ್ತು ಖನಿಜಗಳು ಮತ್ತು ಭೌಗೋಳಿಕ – ಪಾರಂಪರಿಕ ತಾಣಗಳ ಸಂರಕ್ಷಣೆ ಕುರಿತ ಪ್ರಸ್ತಾವಿತ ಶಾಸನಗಳು ಸೇರಿವೆ. ಹೊಸ ಆದಾಯ ತೆರಿಗೆ ಮಸೂದೆ, 2025ರ ಕುರಿತು ಸಂಸದೀಯ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ನ್ಯಾಯಾಧೀಶರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಚರ್ಚಿಸುವ ನಿರೀಕ್ಷೆ ಕೂಡ ಇದೆ. ಇದು ಮಹತ್ವದ ಕಾರ್ಯಸೂಚಿಗೆ ಮತ್ತಷ್ಟು ಸೇರ್ಪಡೆಯಾಗಿದೆ.



