ಕಳಪೆ ರಸ್ತೆ ಕಾಮಗಾರಿ ನವ ಕರ್ನಾಟಕ ರಕ್ಷಣಾ ವೇದಿಕೆ ಆರೋಪ

ಕೆಜಿಎಫ್:
ತಾಲ್ಲೂಕಿನ ಸುಂದರಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಯಸಂದ್ರ ಗ್ರಾಮದಿಂದ ಸುಂದರಪಾಳ್ಯ ಕಲ್ಪಿಸುವ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಮಾಡಿದ್ದಾರೆ ಎಂದು ನವ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಂದರಪಾಳ್ಯ ಗ್ರಾಮದಿಂದ ರಾಯಸಂದ್ರ ಗ್ರಾಮದವರೆಗಿನ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಈ ರಸ್ತೆಯನ್ನು ಕೇವಲ ಆರು ತಿಂಗಳ ಹಿಂದೆ ಅಷ್ಟೇ ಡಾಂಬರು ರಸ್ತೆ ನಿರ್ಮಾಣ ಮಾಡಿದ್ದು, ಕಳಪೆ ಕಾಮಗಾರಿ ಎಂದು ನವ ಕರ್ನಾಟಕ ರಕ್ಷಣಾ ವೇದಿಕೆಯ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಕಿರಣ್ ಕುಮಾರ್ ಆರೋಪಿಸಿದ್ದಾರೆ.
ಸುಮಾರು ಅರವತ್ತು ಲಕ್ಷ ರೂಪಾಯಿ ವೆಚ್ಚದ ಈ ಕಾಮಗಾರಿಗೆ ಯೋಗ್ಯವಲ್ಲ ಏಕೆಂದರೆ ರಸ್ತೆಯನ್ನು ನಿರ್ಮಾಣ ಮಾಡಿ ಇನ್ನು ಆರು ತಿಂಗಳು ಮುಗಿದಿಲ್ಲ ಈಗಾಗಲೇ ಡಾಂಬರು ಸಮೇತ ಕಿತ್ತುಬರುತ್ತಿದೆ ಎಂದು ಸಂಘಟನೆಯ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶೇಷಾದ್ರಿ ಅವರಿಗೂ ಈ ಬಗ್ಗೆ ದೂರು ಸಲ್ಲಿಸಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗುತ್ತಿಗೆದಾರರಾದ ಮುನಿರೆಡ್ಡಿ ರವರು ರಸ್ತೆಯನ್ನು 25 ಎಂ.ಎಂ.ರಸ್ತೆ ನಿರ್ಮಾಣ ಮಾಡಲು ತಿಳಿಸಿದ್ದರು. ಆದರೆ ನಾವು 30 ಎಂ.ಎಂ.ರಸ್ತೆಯನ್ನು ನಿರ್ಮಾಣ ಮಾಡಿದ್ದೇವೆ. ಪಕ್ಕದಲ್ಲಿಯೇ ಬೆಂಗಳೂರು-ಚೆನೈ ರಸ್ತೆಯ ಕಾಮಗಾರಿಯು ನಡೆಯುತ್ತಿದ್ದು, ಬಾರಿ ತೂಕದ ಟಿಪ್ಪರ್ ವಾಹನಗಳು ಸಂಚರಿಸುವುದರಿಂದ ಕೆಲವು ಕಡೆ ಡಾಂಬರು ಕಿತ್ತು ಬಂದಿದೆ ಅದಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ರಾಜಗೋಪಾಲ್ ಗೌಡ, ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ತಾಲ್ಲೂಕು ಉಪಾಧ್ಯಕ್ಷ ಸಂದೀಪ್ ಗೌಡ, ಕಾರ್ಯದರ್ಶಿ ಭೂಪಲ್ ನಾಯ್ಡು ಇದ್ದರು.



